
ಅಗ್ನಿಪಥ್ಗೆ ಆಯ್ಕೆಯಾದ ಎನ್ಸಿಸಿ ಕೆಡೆಟ್ ವಿಜೇತ್ ಎಂ.
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್ಸಿಸಿ ಕೆಡೆಟ್ ತೃತೀಯ ಬಿ.ಕಾಂ. ವಿದ್ಯಾರ್ಥಿ ವಿಜೇತ್ ಎಂ. ಅವರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ್ಗೆ ಆಯ್ಕೆಯಾಗುವ ಮೂಲಕ ಭಾರತೀಯ ಸೇನೆಯ ಭಾಗವಾಗುವ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.
ಇವರು ಪುತ್ತೂರಿನ ಅರಿಯಡ್ಕ ಗ್ರಾಮದ ಪದ್ಮನಾಭ ಪೂಜಾರಿ ಮತ್ತು ಯಶೋಧಾ ದಂಪತಿಯ ಪುತ್ರರಾಗಿದ್ದು, 2024ರ ಆಗಸ್ಟ್ನಲ್ಲಿ ಶಿವಮೊಗ್ಗದಲ್ಲಿ ನಡೆದ ರೇಲಿಯಲ್ಲಿ ಭಾಗವಹಿಸಿ ದೈಹಿಕ ಸದೃಢತೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಗ್ನಿವೀರ್ ಆಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದ ವಿದ್ಯಾರ್ಥಿ ವಿಜೇತ್ ಅವರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಮಾತೃಭೂಮಿಯನ್ನು ರಕ್ಷಿಸುವಲ್ಲಿ ಯುವಕರು ವಹಿಸುವ ನಿರ್ಣಾಯಕ ಪಾತ್ರ ಹಾಗೂ ರಾಷ್ಟ್ರದ ಸೇವೆಯಲ್ಲಿ ಯುವಕರ ಆಕಾಂಕ್ಷೆಗಳನ್ನು ಪೋಷಿಸುವಲ್ಲಿ ಅಗ್ನಿಪಥ ಕಾರ್ಯಕ್ರಮದ ಪಾತ್ರವನ್ನು ಶ್ಲಾಘಿಸಿದರು.
ವಿಜಯ್ ಅವರಂತಹ ಯುವ ವ್ಯಕ್ತಿಗಳು ರಾಷ್ಟ್ರದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅದರಲ್ಲೂ ತಮ್ಮ ಮಗನನ್ನು ರಾಷ್ಟ್ರಸೇವೆಗೆ ಕಳುಹಿಸಲು ಮುಂದಾದ ವಿಜಯ್ ಅವರ ತಾಯಿ ಯಶೋದ ಜಿ. ಅವರನ್ನು ಪ್ರಾಂಶುಪಾಲರು ಅಭಿನಂದಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೇಮಲತಾ, ಕುಲಸಚಿವ (ಮೌಲ್ಯಮಾಪನ) ವಿನಯಚಂದ್ರ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಾಧಾಕೃಷ್ಣ ಗೌಡ, ಎನ್ಸಿಸಿ ನೌಕಾದಳದ ಅಧಿಕಾರಿ ಕೃಷ್ಣ ತೇಜಸ್ವಿ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ, ಉಪನ್ಯಾಸಕರಾದ ಧನ್ಯಾ ಪಿ.ಟಿ., ಹರ್ಷಿತಾ, ಪ್ರವೀಣ್ ಡಿ., ಸ್ಪರ್ಲ್ ಫಿಯೋನಾ, ನೋವೆಲಿನ್ ಡಿ’ಸೋಜಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.