
ಎಡನೀರು ಶ್ರೀಗಳ ವಾಹನದ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಆಗ್ರಹ
ಕಾಸರಗೋಡು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ವಾಹನದ ಮೇಲೆ ದಾಳಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆಸುವ ಮಧ್ಯೆ ಉದ್ದೇಶಪೂರ್ವಕವಾಗಿಯೇ ಸ್ವಾಮೀಜಿಗೆ ಅಪಾಯ ತಂದೊಡ್ಡುವ ಪ್ರಯತ್ನ ನಡೆಸಲಾಗಿದೆ. ಸ್ಪರ್ಧೆ ನಡೆಸುವ ಸಂದರ್ಭ ಕಾನೂನು ಗಾಳಿಗೆ ತೂರಿ ರಸ್ತೆ ತಡೆ ನಡೆಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಇತ್ತ ಮುಖಮಾಡಿರಲಿಲ್ಲ. ದೂರು ನೀಡಿದರೂ, ಆರೋಪಿಗಳ ವಿರುದ್ಧ ಕೇಸು ದಾಖಲಿಸದೆ, ಅವರನ್ನು ಬಂಧಿಸುವ ಕಾರ್ಯಕ್ಕೂ ಮುಂದಾಗದಿರುವುದು ಖಂಡನೀಯ. ಸ್ವಾಮೀಜಿ ಅವರ ಪ್ರಯಾಣಕ್ಕೂ ತಡೆಯೊಡ್ಡಿರುವುದರಿಂದ ಸ್ವಾಮೀಜಿ ಹಾಗೂ ಎಡನೀರು ಮಠ ಭದ್ರತಾ ಬೆದರಿಕೆ ಎದುರಿಸುವಂತಾಗಿದೆ ಎಂದರು.
ಎಡನೀರು ಸ್ವಾಮೀಜಿ ಪ್ರಯಾಣಿಸುವಾಗ ಚಿನ್ನ ಮತ್ತು ಬೆಲೆಬಾಳುವ ಇತರ ವಸ್ತುಗಳನ್ನು ಜತೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸಾಮಾಜಿಕ ಜಾಲತಾಣ ಮೂಲಕ ನೀಡಿರುವ ಹೇಳಿಕೆ ದುರದೃಷ್ಟಕರ. ಸಂಸದರ ಈ ರೀತಿಯ ಪ್ರಚಾರದಿಂದ ಬೆದರಿಕೆ ಹಚ್ಚಾಗಿದೆ. ಇದರಿಂದ ಸ್ವಾಮೀಜಿ ಹಾಗೂ ಶ್ರೀಮಠಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು. ಶ್ರೀಮಠದಲ್ಲಿ ಪರವಾನಗಿ ಹೊಂದಿದ ಬಂದೂಕನ್ನು ನವೀಕರಣ ಹೆಸರಲ್ಲಿ ನಾಲ್ಕು ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿರಿಸಲಾಗಿರುವುದು ಖಂಡನೀಯ ಎಂದರು.
ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಎಂ.ಗೋಪಾಲಕೃಷ್ಣ ಉಪಸ್ಥಿತರಿದ್ದರು.