
ಕುಂಭಾಶಿಯಲ್ಲಿ ರಸ್ತೆ ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯ
ಕುಂದಾಪುರ: ಕೊಲ್ಲೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಹೊನ್ನಾವರದಿಂದ ಕೇರಳಕ್ಕೆ ಮೀನು ತುಂಬಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನ. 20 ರಂದು ಬುಧವಾರ ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಸಿ ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಸಂಭವಿಸಿದೆ.
ಗೋಕರ್ಣ, ಕೊಲ್ಲೂರು ದೇವರ ದರ್ಶನ ಪಡೆದು ಕೇರಳಕ್ಕೆ ಹೋಗುವ ಸಂದರ್ಭ ಇನ್ನೋವಾ ಕಾರಿನ ಚಾಲಕ ಕುಂಭಾಸಿ ಚಂಡಿಕಾ ಶ್ರೀ ದುರ್ಗಪರಮೇಶ್ವರೀ ದೇವಸ್ಥಾನಕ್ಕೆ ಹೋಗಲೆಂದು ಸ್ವಲ್ಪ ಮುಂದು ಹೋಗಿ ಕಾರು ನಿಲ್ಲಿಸಿ ಮತ್ತೆ ಹಿಮ್ಮುಖವಾಗಿ ಬರುವ ವೇಳೆ ಹಿಂದಿನಿಂದ ಬಂದ ಇನ್ಸುಲೇಟರ್ ವಾಹನ ಚಾಲಕನು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಜಖಂ ಗೊಂಡಿದೆ.
ಇನೋವಾ ಕಾರಿನಲ್ಲಿ ಪ್ರಯಾಣಿಕರಾದ ಕೇರಳ ಪಯ್ಯನೂರು ಮೂಲದ ಮಧುಸೂದನ್(64), ಭಾರ್ಗವನ್(65), ನಾರಾಯಣ್, ವತ್ಸಲಾ , ಅನಿತಾ, ಚೈತ್ರಾ ಹಾಗೂ ಚಾಲಕ ಪೈಝಲ್(35) ಇದ್ದರು ಎನ್ನಲಾಗಿದೆ.
ನಾರಾಯಣ್, ವತ್ಸಲಾ, ಅನಿತಾ, ಚೈತ್ರಾ ಗಂಭೀರ ಗಾಯಗೊಂಡಿದ್ದು ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇನ್ಸುಲೇಟರ್ ಲಾರಿ ಚಾಲಕ ಹೊನ್ನಾವರದ ಮಹೇಶ್ ಸೇರಿ ಉಳಿದರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಗೊಂಡಿದೆ. ಅಲ್ಲದೆ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ರಾಣಾಧಿಕಾರಿಗಳಾದ ಪ್ರಸಾದ್ ಮತ್ತು ಸುದರ್ಶನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗಳಿಗೆ ಸಾಗಿಸಿದರು. ಕ್ರೈನ್ ತರಿಸಿ, ರಸ್ತೆಗೆ ಅಡ್ಡ ಬಿದ್ದಿದ್ದ ಲಾರಿಯನ್ನು ಎತ್ತಿ ಬದಿಗೆ ಸರಿಸಲಾಯಿತು. ಈ ವೇಳೆ ಸುಮಾರು ಒಂದು ಗಂಟೆ ರಾಷ್ಟ್ರೀಯ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಸಂಚಾರ ಸ್ಥಗಿತಗೊಂಡಿತ್ತು.