
ಮಂಗಳೂರಿನಲ್ಲಿ 30 ಎಕರೆ ಸರ್ಕಾರಿ ಜಮೀನು ವಕ್ಫ್ ಮಂಡಳಿ ಪಾಲು: ಸತೀಶ್ ಕುಂಪಲ
ಮಂಗಳೂರು: ವಕ್ಫ್ ಹಗರಣ ರಾಜ್ಯಾದ್ಯಂತ ಮಿತಿಮೀರಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದರ ಪರಿಣಾಮ ಬೀರಿದೆ. ಮಂಗಳೂರು ತಾಲೂಕು ಒಂದರಲ್ಲಿಯೇ 30 ಎಕರೆ ಸರ್ಕಾರಿ ಜಮೀನು ವಕ್ಫ್ ಮಂಡಳಿ ಪಾಲಾಗಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಬಿದಿರೆಯಲ್ಲೂ ಸಾಕಷ್ಟು ಎಕರೆ ಭೂಮಿ ವಕ್ಫ್ ಆಸ್ತಿಯಾಗಿ ಮಾರ್ಪಟ್ಟಿದೆ. ಮಂಗಳೂರು ತಾಲೂಕಿಗೆ ಸಂಬಂಧಿಸಿ ದೊರೆತ ಮಾಹಿತಿಯಂತೆ ಇದುವರೆಗೆ 30 ಎಕ್ರೆ ಭೂಮಿ ವಕ್ಫ್ ಗೆ ಸೇರಿರುವುದನ್ನು ಸರ್ಕಾರಿ ಅಂಕಿಅಂಶಗಳು ದೃಢಪಡಿಸುತ್ತಿವೆ. ಇದು ಗಂಭೀರ ವಿಷಯ ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದವರು ಹೇಳಿದರು.
ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಆಸ್ತಿ ಪಹಣಿಯನ್ನೊಮ್ಮೆ ಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ. ಹಂತ ಹಂತವಾಗಿ ಕಂದಾಯ ಭೂಮಿ ವಕ್ಪ್ ಪಾಲಾಗುತ್ತಿರುವುದನ್ನು ಸಹಿಸಲಾಗದು ಎಂದರು
ಬಹೃತ್ ಪ್ರತಿಭಟನೆ
ವಕ್ಫ್ ಬೋರ್ಡ್ ಕಬಳಿಸಿರುವ ಆಸ್ತಿಯನ್ನು ಮರು ಪಡೆದುಕೊಳ್ಳುವ ನಿಟ್ಟಿನಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷ ವಾಕ್ಯದಡಿ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನ.22ರಂದು ಬೃಹತ್ ಹೋರಾಟ ನಡೆಸಲು ಎಂದು ಸತೀಶ್ ಕುಂಪಲ ಹೇಳಿದರು.
ಅಂದು ಪೂರ್ವಾಹ್ನ ೯ರಿಂದ ಸಂಜೆ ೫ ಗಂಟೆಯವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗ ಪ್ರತಿಭಟನೆ ನಡೆಯಲಿದೆ. ಮಠಾಧೀಶರು, ರೈತರು, ಜನಪ್ರತಿನಿಧಿಗಳು, ನಾಗರಿಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನತೆ ಭಾಗವಹಿಸಲಿದ್ದಾರೆ ಎಂದರು.
ಜನವಿರೋಧಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರೊಂದಿಗೆ ಬಡವರ ಜಾಗವನ್ನೂ ಲೂಟಿಮಾಡುತ್ತಿದೆ. ವಕ್ಫ್ ಹಗರಣ ರಾಜ್ಯದ ಇತಿಹಾಸದಲ್ಲಿಯೇ ಘೋರ ಹಗರಣವಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ. ಈ ನಿಟ್ಟಿನಲ್ಲಿ ಬಿಜೆಪಿ ದಿಟ್ಟ ಹೆಜ್ಜೆ ಇಟ್ಟಿದೆ. ಜಿಲ್ಲೆಯಲ್ಲಿ ಮಾಜಿ ಶಾಸಕ ಮೋನಪ್ಪ ಭಂಡಾರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದವರು ಹೇಳಿದರು.
ಬಡವರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನೂ ಕಿತ್ತುಕೊಳ್ಳುತ್ತಿದೆ. 22 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದಾಗಿರುವುದು ಆತಂಕಕಾರಿ ಬೆಳವಣಿಗೆ ಜನವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಜಾಗೃತಿ ಹೋರಾಟ ಅನಿವಾರ್ಯವಾಗಿದೆ ಎಂದು ಸತೀಶ್ ಕುಂಪಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ಯತೀಶ್ ಆರ್ವರ್, ಡಾ.ಮಂಜುಳಾ ರಾವ್, ಸಂಗೀತಾ ನಾಯಕ್, ಸುನಿಲ್ ಆಳ್ವ ಉಪಸ್ಥಿತರಿದ್ದರು.