
ವಿದೇಶದ ಹೈಡ್ರೋವೀಡ್ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ: ಮಾದಕ ದ್ರವ್ಯ ವಶ
Saturday, November 2, 2024
ಮಂಗಳೂರು: ನಗರಕ್ಕೆ ವಿದೇಶದಿಂದ ಹೈಡ್ರೋವೀಡ್ ಗಾಂಜಾ ಎಂಬ ಮಾದಕದ್ರವ್ಯವನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡಿದ ಸಿಸಿಬಿ ಪೊಲೀಸರು ಆತನಿಂದ 30 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾ, 2.5 ಕೆಜಿ ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ತೊಕ್ಕೊಟ್ಟು, ಚೊಂಬುಗುಡ್ಡೆ ಮಸೀದಿಯ ಹತ್ತಿರ ನಿವಾಸಿ ಹೆಚ್. ಮೊಹಮ್ಮದ್ ಹಫೀಜ್ (23) ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಹಫೀಜ್ ಮಂಗಳೂರು ನಗರಕ್ಕೆ ವಿದೇಶದಿಂದ ಲಕ್ಷಾಂತರ ರೂ. ಮೌಲ್ಯದ ನಿಷೇಧಿತ ಮಾದಕದ್ರವ್ಯ ಹೈಡ್ರೋವೀಡ್ ಗಾಂಜಾವನ್ನು ತರಿಸಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ಕುದ್ರೋಳಿ ಪರಿಸರದಲ್ಲಿ ಹೈಡ್ರೋವೀಡ್ ಗಾಂಜಾ ಮತ್ತು ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ.
ಈತನಿಂದ 30 ಲಕ್ಷ ರೂ. ಮೌಲ್ಯದ 300 ಗ್ರಾಂ ಹೈಡ್ರೋವೀಡ್ ಗಾಂಜಾ ಹಾಗೂ 75,000 ರೂ. ಮೌಲ್ಯದ 2.5 ಕೆಜಿ ಗಾಂಜಾ, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 0,85,500 ರೂ. ಎಂದು ಅಂದಾಜಿಸಲಾಗಿದೆ. ಈ ಹೈಡ್ರೋವೀಡ್ ಗಾಂಜಾವನ್ನು ಥೈಲ್ಯಾಂಡ್‌ನಿಂದ ತಂದಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ. ಈ ಮಾದಕದ್ರವ್ಯ ಮಾರಾಟ ದಂಧೆಯಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯುವುದು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.