
ಜಿಎಸ್‌ಟಿಯಲ್ಲಿ ಸರಿಯಾಗಿ ಸಿಗದ ನ್ಯಾಯದಿಂದ ರಾಜ್ಯಕ್ಕೆ ತೀವ್ರ ಆರ್ಥಿಕ ಅನ್ಯಾಯ: ದಿನೇಶ್ ಗುಂಡೂರಾವ್
ಮಂಗಳೂರು: ಅತ್ಯಧಿಕ ಜಿಎಸ್‌ಟಿ ಸಂಗ್ರಹಿಸುವ ರಾಜ್ಯ ಕರ್ನಾಟಕ ಆಗಿದ್ದರೂ ರಾಜ್ಯಕ್ಕೆ ಸಿಗಬೇಕಾದ ಪಾಲು ಸಿಗದ ಕಾರಣ ರಾಜ್ಯ ತೀವ್ರ ಆರ್ಥಿಕ ಅನ್ಯಾಯಕ್ಕೆ ಒಳಗಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ನಡೆದ ರಾಜ್ಯೋತ್ಸವ ದಿನಾಚರಣೆಯಲ್ಲಿ ಅವರು ಸಂದೇಶ ನೀಡಿದರು. ಈ ಸಂದರ್ಭ 63 ಮಂದಿ ಸಾಧಕರು ಹಾಗೂ 24 ಸಂಘ, ಸಂಸ್ಥೆಗಳಿಗೆ ಸಚಿವರು ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದೇಶದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರ ಹಣಕಾಸು ಆಯೋಗದಿಂದ ಸಿಗಬೇಕಾದ ಹಣದಲ್ಲಿ ತೀವ್ರ ಕಡಿತವಾಗಿದೆ. ನಮ್ಮ ರಾಜ್ಯದಲ್ಲಿ ತೆರಿಗೆಯನ್ನು ರಾಜ್ಯಕ್ಕೆ ಅನುಕೂಲಕ್ಕೆ ತಕ್ಕಂತೆ ವಿಧಿಸುವ ಅಧಿಕಾರ ಜಿಎಸ್‌ಟಿ ಸಮಿತಿಗೆ ಇಲ್ಲ. ಇದಕ್ಕೆ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣವೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿ ಯಾವ ರಾಜ್ಯಕ್ಕೂ ಬರಬಾರದು. ಕರ್ನಾಟಕ ರಾಜ್ಯೋತ್ಸವದ ಈ ದಿನದಂದು ಇದನ್ನು ನೆನಪಿಸಬೇಕಿದೆ. ನಮ್ಮ ಶ್ರಮದ ಪಾಲನ್ನು ಯಾರೋ ಅ ನ್ಯಾಯವಾಗಿ ಕಸಿದುಕೊಳ್ಳುತ್ತಿದ್ದಾರೆಂ ಎಂಬ ಭಾವನೆ ರಾಜ್ಯಗಳಿಗೆ ಬರಬಾರದು. ಕರ್ನಾಟಕ ಸರ್ಕಾರ ಇದನ್ನು ಪ್ರಶ್ನೆ ಮಾಡಿದೆ. ರಾಜ್ಯದ ಹಿತಾಸಕ್ತಿಯ ಪರವಾಗಿ ಸರ್ಕಾರ ಗಟ್ಟಿಯಾಗಿ ನಿಂತಿದೆ ಎಂದವರು ಹೇಳಿದರು.
ದಕ್ಷಿಣೋತ್ತರ ತಾರತಮ್ಯ:
ಸ್ವಾತಂತ್ರ್ಯ ನಂತರ ಕರ್ನಾಟಕ ಜನಸಂಖ್ಯಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿ ಯಶಸ್ಸು ಕಂಡಿದೆ. ಆದರೆ ಶಿಕ್ಷಣದಲ್ಲಿ ಹಿಂದುಳಿದಿರುವ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಸಮರ್ಪಕವಾಗಿ ಅಳವಡಿಸದೇ ಇರುವ ಹಿಂದಿ ಮಾತನಾಡುವ ಉತ್ತರ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸದಸ್ಯರನ್ನು ನೀಡಲಾಗಿದೆ. ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳಿಗೆ ಲೋಕಸಭಾ ಸದಸ್ಯರನ್ನು ಕಡಿಮೆ ಮಾಡಿ ಕೇಂದ್ರ ಮಟ್ಟದಲ್ಲಿ ದಕ್ಷಿಣ ಭಾರತ ಹಾಗೂ ಕರ್ನಾಟಕದ ಜನರ ಪ್ರಾತಿನಿಧ್ಯವನ್ನೇ ಇಲ್ಲವಾಗಿಸುವ ಕ್ರಮದ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.
ನಮ್ಮ ಕನ್ನಡ ಸಮೃದ್ಧವಾಗಿದೆ ಎಂದು ನಾವು ಸುಮ್ಮನಿರಲಾಗದು. ರಾಜ್ಯವನ್ನು ಸಮೃದ್ಧ ಕರ್ನಾಟಕ ಮಾಡುವುದೇ ಸರ್ಕಾರದ ಗುರಿಯಾಗಿದೆ. ಅನೇಕ ಜನಪರ, ಜ ನಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಏಕೀಕೃತ ಕರ್ನಾಟಕ ರಾಜ್ಯ ಉದಯವಾದಾಗಿನಿಂದಲೂ ಕೇಳಿಬರುತ್ತಿದ್ದ ಪ್ರಾದೇಶಿಕ ಅಸಮತೋಲನದ ಕೂಗನ್ನು ನಿವಾರಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಸೇರಿ ಆ ಭಾಗದ ಪ್ರಗತಿಗೆ ಅನೇಕ ಯೋಜನೆಗಳನ್ನು ಮತ್ತು ಮಹತ್ವದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ದಿಟ್ಟಹೆಜ್ಜೆ ಇಡಲಾಗಿದೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ, ಮೇಯರ್ ಮನೋಜ್, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಾಲಿಕೆ ಸದಸ್ಯರಾದ ಎ.ಸಿ. ವಿನಯರಾಜ್, ನವೀನ್ ಡಿಸೋಜಾ, ಶಾಹುಲ್ ಹಮೀದ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ವಿವಿಧ ನಿಗಮ, ಅಕಾಡೆಮಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಉಮರ್ ಯು.ಎಚ್., ಸ್ಟ್ಯಾನಿ ಅಲ್ವಾರಿಸ್, ದೇವಿಪ್ರಸಾದ್ ಶೆಟ್ಟಿ, ಡಾ. ಶಿವಪ್ರಕಾಶ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಪಾಲಿಕೆ ಆಯುಕ್ತ ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್, ಜಿಲ್ಲಾ ಎಸ್ಪಿ ಯತೀಶ್ ಮತ್ತಿತರರಿದ್ದರು.