
ಗೌಡ, ಗಾಂಧಿ, ಸಿಂಗ್ರನ್ನು ಪ್ರಧಾನಿ ಮಾಡಿದ್ದು ಮುಸ್ಲಿಮ್ ಮತದಾನದ ಹಕ್ಕುಗಳು, ಸ್ವಾಮೀಜಿ ತಿಳಿಯಲಿ: ಕೆ. ಅಶ್ರಫ್
ಮಂಗಳೂರು: ಇತ್ತೀಚೆಗೆ ಒಕ್ಕಲಿಗ ಸಂಸ್ಥಾನದ ಸ್ವಾಮೀಜಿಯೋರ್ವರು ಮುಸ್ಲಿಮರ ಮತದಾನದ ಹಕ್ಕನ್ನು ಹಿಂಪಡೆಯಬೇಕು ಎಂದು ಹೇಳಿಕೆ ನೀಡಿ ಏನೂ ಸಾಧನೆ ಮಾಡಿದ ಕೀರ್ತಿಯನ್ನು ಪಡೆಯಲು ಪ್ರಯತ್ನಿಸಿರುವುದು ವಿಷಾದನೀಯ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿಯಂತವರು ಮತ್ತು ಇತರರು ತಿಳಿಯಬೇಕಿದೆ, ದಕ್ಷಿಣ ಭಾರತದ ಹಂತದಲ್ಲಿ, ಅಂದು ಸಂಧಿಗ್ಧತೆಯಲ್ಲಿದ್ದ ಸಂಧರ್ಭದ ಈ ದೇಶದಲ್ಲಿ ಪ್ರಧಾನಿಯಾದ ದೇವೇಗೌಡರು ಆಯ್ಕೆಯಾದದ್ದು ಮುಸ್ಲಿಮರ ಮತಗಳಿಂದ ಎಂದು ಅರಿಯಲಿ.
ಈ ದೇಶದ ಇನ್ನೋರ್ವ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಅವರು ಕೇಂದ್ರ ಸರಕಾರ ರಚನೆ ಮಾಡಿ ಆಳ್ವಿಕೆ ಮಾಡಲು ಕಾರಣ ಈ ದೇಶದಲ್ಲಿರುವ ಮುಸ್ಲಿಮ್ ಮತದಾನದ ಹಕ್ಕುಗಳು. ಭಾರತದ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ರಾಜಕೀಯ ಪುನರ್ಜನ್ಮ ಪಡೆದದ್ದು ಮುಸ್ಲಿಮ್ ಅಲ್ಪಸಂಖ್ಯಾತರ ಪರಿಗಣನಾತ್ಮಾಕ ಮತಗಳಿಂದ ಎಂಬುದನ್ನು ಒಕ್ಕಲಿಗ ಸ್ವಾಮೀಜಿ ನೆನಪಿಸಿಕೊಳ್ಳಲಿ.
ಈ ದೇಶದ ಸಂವಿಧಾನ ಕರ್ತ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಂದು ಸಂಸತ್ಗೆ ಚುನಾಯಿಸಿ ಕಳುಹಿಸಲು ಮುಸ್ಲಿಮರಿಗೆ ಇರುವ ಮತದಾನದ ಹಕ್ಕನ್ನು ಚಲಾಯಿಸುವುದರಿಂದ ಕೂಡಾ ಪ್ರಯತ್ನಿಸಲಾಗಿದೆ ಎಂಬುದನ್ನು ಈ ದೇಶದ ಜನತೆಗೆ ಸ್ವಾಮೀಜಿಯವರು ಹೇಳಬೇಕಿದೆ. ಈ ದೇಶದ ಸರ್ವಾಧಿಕಾರಿ ಪ್ರವೃತ್ತಿಯನ್ನು ಶಕ್ತವಾಗಿ ಎದುರಿಸಿ ಸೆಟೆದು ನಿಂತ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ದೀದಿಯವರನ್ನು ಅಧಿಕಾರಕ್ಕೆ ತಂದಿರುವುದು ಮುಸ್ಲಿಮ್ ಮತದಾನದ ಹಕ್ಕುಗಳು, ದೇಶದ ಜಾತ್ಯಾತೀತ ಸಿದ್ಧಾಂತಕ್ಕೆ ಬುನಾಧಿಯಾಗಿ ನಿಂತ ನೆಹರೂ ಅವರನ್ನು ಬೆಂಬಲಿಸಿದ ಅಬುಲ್ ಕಲಾಂ ಅಜಾದ್ ಅವರನ್ನು ಈ ದೇಶಕ್ಕೆ ಸಮರ್ಪಿಸಿದ್ದು ಮುಸ್ಲಿಮ್ ಮತದಾನದ ಹಕ್ಕುಗಳು.
ಗಾಂಧಿ ಕುಟುಂಬದ ಸದಸ್ಯರನ್ನು ಈ ದೇಶದ ಮಾಧ್ಯಮಗಳು ನಿರ್ಲಕ್ಷಿಸಿದಾಗ ಭರ್ಜರಿ ಮತಗಳಿಂದ ಸಂಸತ್ಗೆ ಕಳುಹಿಸಿದ್ದು ಮುಸ್ಲಿಮ್ ಮತದಾನದ ಹಕ್ಕುಗಳು. ಈ ದೇಶದಲ್ಲಿ ವಿಧ್ವೇಷ ರಾಜಕಾರಣ ಪೆಡಂಭೂತವಾಗಿ ಮೆರೆದು, ಪ್ರಜಾಪ್ರಭುತ್ವ ಇನ್ನೇನು ಅಸ್ತಿತ್ವ ಕಳೆದು ಕೊಳ್ಳುತ್ತದೆ ಎಂಬ ಸಂದರ್ಭದಲ್ಲಿ ಈ ದೇಶಕ್ಕೆ ಇಂದು ಒಂದು ಬಲಿಷ್ಠ ವಿರೋಧ ಪಕ್ಷದ ಸ್ಥಾನ ಮಾನದ ಕೊಡುಗೆ ನೀಡಿದ್ದು ಮುಸ್ಲಿಮ್ ಮತದಾನದ ಹಕ್ಕುಗಳು. ಭಾರತದ ಜಾತ್ಯತೀತತೆ, ಸಾರ್ವಬೌಮತ್ವ, ಪ್ರಜಾ ಪ್ರಭುತ್ವ ಮತ್ತು ಏಕತೆಗೆ ಇಂದು ಭದ್ರ ಬುನಾದಿಯಾಗಿ ನಿಂತಿರುವುದು ಮುಸ್ಲಿಮ್ ಮತದಾನದ ಹಕ್ಕುಗಳು. ಸ್ವಾಮೀಜಿಯಂತವರು ಅರಿಯಬೇಕು ಮುಸ್ಲಿಮ್ ಮತದಾನದ ಹಕ್ಕನ್ನು ಪ್ರಶ್ನಿಸುವ ಉಸಾಬರಿಗೆ ಹೋದರೆ ಈ ದೇಶಕ್ಕೆ ಮುಸ್ಲಿಮರು ಸ್ಥಾಪಿಸಿ ನೆಲೆ ನೀಡಿದ ಅದೆಷ್ಟೋ ಪ್ರಜಾಪ್ರಭುತ್ವ ಸಂಸ್ಥೆಗಳ ಕೊಡುಗೆಗಳ ಪಟ್ಟಿಯನ್ನು ಬಹಿರಂಗ ಪಡಿಸಬೇಕಾದೀತು ಎಂದು ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.