ಮಂಗಳೂರು ವಿ.ವಿ. ವಿರುದ್ಧ ವಿದ್ಯಾರ್ಥಿಳ ಉಗ್ರ ಪ್ರತಿಭಟನೆ: ಪೊಲೀಸ್ ಸಿಬಂದಿ, ವಿದ್ಯಾರ್ಥಿಗೆ ಗಾಯ, ಹಾನಿ

ಮಂಗಳೂರು ವಿ.ವಿ. ವಿರುದ್ಧ ವಿದ್ಯಾರ್ಥಿಳ ಉಗ್ರ ಪ್ರತಿಭಟನೆ: ಪೊಲೀಸ್ ಸಿಬಂದಿ, ವಿದ್ಯಾರ್ಥಿಗೆ ಗಾಯ, ಹಾನಿ


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಅಂಕಪಟ್ಟಿಯ ಸಮಸ್ಯೆ, ಅವೈಜ್ಞಾನಿಕ ಕಾಲೇಜುಗಳ ಶುಲ್ಕಗಳ ಹೆಚ್ಚಳ, ಪರೀಕ್ಷಾ ಶುಲ್ಕ ಹೆಚ್ಚಳ ಯುಯುಸಿಎಂಎಸ್‌ನಲ್ಲಿರುವ ಗೊಂದಲಗಳು ಮತ್ತು ವಿಶ್ವವಿದ್ಯಾಲಯದಲ್ಲಿರುವ ಹಲವು ಸಮಸ್ಯೆಗಳನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಕೊಣಾಜೆ ಮಂಗಳಗಂಗೋತ್ರಿಯ ಆಡಳಿತ ಕಚೇರಿ ಎದುರುಗಡೆ ಇಂದು ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲೆಯ ವಿವಿಧ ಕಾಲೇಜಿನಿಂದ ಪ್ರತಿಭಟನೆಗೆ ಆಗಮಿಸಿರುವ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದರು. ಬಸ್ ಮೂಲಕ ತಂಡೋಪತಂಡವಾಗಿ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ವಿವಿ ಆಡಳಿತ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ತಡೆಹಿಡಿಯಲಾಗಿತ್ತು. ಆರಂಭದಲ್ಲಿ ಕಚೇರಿ ಎದುರಿನ ರಸ್ತೆಯಲ್ಲಿ ಘೋಷಣೆಗಳನ್ನು ಕೂಗಿದರು. ಬಳಿಕ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಿದ ಪ್ರತಿಭಟನಾಕಾರರು ಆಡಳಿತ ಕಚೇರಿಯ ಒಳಗೆ ನುಗ್ಗಲು ಪ್ರಯತ್ನಿಸಿದರು.

ಈ ಸಂದರ್ಭ ವಿದ್ಯಾರ್ಥಿಗಳು ಒಳ ಹೋಗದಂತೆ ಪೊಲೀಸರು ತಡೆಯೊಡ್ಡಿದರು. ಈ ನೂಕಾಟ ತಳ್ಳಾಟಗಳ ನಡುವೆ ವಿವಿ ಆಡಳಿತ ಕಚೇರಿಯ ಪ್ರವೇಶ ದ್ವಾರದ ಗಾಜು ಪುಡಿಯಾಗಿದೆ. ಓರ್ವ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗೆ ಗಾಯವಾಗಿದೆ. ಪೊಲೀಸ್ ಸಿಬ್ಬಂದಿಯ ಕೈಗೆ ಗಾಜಿನ ತುಂಡು ತಾಗಿ ಗಾಯವಾಗಿದೆ. ಇದೇ ವೇಳೆ ಓರ್ವ ವಿದ್ಯಾರ್ಥಿ ಕೈಗೂ ಗಾಯವಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿ.ವಿ. ಕುಲಪತಿ ಪಿ.ಎಲ್. ಧರ್ಮ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಾಲೇಜಿನ ಸ್ವತ್ತಿಗೆ ಹಾನಿ ಎಸಗಿರುವುದು ಒಳ್ಳೆಯ ನಡೆ ಅಲ್ಲ. ಇಂತಹ ಪ್ರವೃತ್ತಿಯನ್ನು ನಾವು ಯಾವುದೇ ಕಾರಣಕ್ಕೆ ಸಹಿಸಲ್ಲ. ಶಾಂತಿಯುತ ಪ್ರತಿಭಟನೆ ಹೆಸರಲ್ಲಿ ಇಂಥದ್ದು ಮಾಡಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದ ಉಪಕುಲಪತಿ, ಬಳಿಕ ವಿದ್ಯಾರ್ಥಿಗಳಿಗೆ ವಿ.ವಿ.ಯಲ್ಲಿರುವ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. ಉಪಕುಲಪತಿ ಉತ್ತರಕ್ಕೆ ವಿದ್ಯಾರ್ಥಿಗಳ ಅಸಮಾಧಾನ ಕೇಳಿ ಬಂದ ಹಿನ್ನೆಲೆಯಲ್ಲಿ ಮನವಿ ಪಡೆದು ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು. ಸರಿಯಾದ ದಿನಾಂಕ ಕೊಡಿ ಎಂದು ಕೇಳಿದ ವಿದ್ಯಾರ್ಥಿಗಳು, ಸಂಜೆಯೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸಂಜೆಯೊಳಗೆ ನಿರ್ಧಾರ ಹೇಳುವುದಾಗಿ ತೆರಳಿದ ಉಪಕುಲಪತಿಗಳ ನಡೆಯನ್ನು ಸಮರ್ಥಿಸದ ವಿದ್ಯಾರ್ಥಿಗಳು ಹೋರಾಟ ಮುಂದುವರಿಸಿದ ಬೆನ್ನಲ್ಲೇ ಎಸಿಪಿ ಧನ್ಯ ನಾಯಕ್ ಮಧ್ಯಪ್ರವೇಶಿಸಿದರು. ಕೊನೆಗೆ ಸಿಂಡಿಕೇಟ್ ಸದಸ್ಯರ ಜೊತೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿ.ಎಲ್ ಧರ್ಮ, ಇದೇ ಶನಿವಾರ ವಿವಿ ರಿಜಿಸ್ಟ್ರಾರ್ ಅನ್ನು ಬೆಂಗಳೂರಿಗೆ ಕಳುಹಿಸಿಕೊಡುವ ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article