ಚೆಂಬುಗುಡ್ಡೆ ಅಪಘಾತ: ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ ಸ್ಪೀಕರ್

ಚೆಂಬುಗುಡ್ಡೆ ಅಪಘಾತ: ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ ಸ್ಪೀಕರ್


ಮಂಗಳೂರು: ತೊಕ್ಕೊಟ್ಟಿನ ಚೆಂಬುಗುಡ್ಡೆಯ ಮಂಗಳೂರು ವಿವಿ ರಸ್ತೆಯಲ್ಲಿ ಸ್ಕೂಟರಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆಯೊಬ್ಬರು ಕಂಟೇನರ್ ಲಾರಿಯಡಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆಯ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ವಿಷಾದ ವ್ಯಕ್ತಪಡಿಸಿದ್ದಾರೆ. 

ಘಟನೆ ಬಳಿಕ ಕೆಲವರು ಪ್ರತಿಭಟನೆ ನಡೆಸಿ ಸಾವಿನಲ್ಲೂ ರಾಜಕೀಯ ನಡೆಸಿದ್ದಾರೆ. ಅವರಿಗೆ ಜೀವಿಸಲು ಪ್ರತಿಭಟನೆಗಳು ಆಹಾರವಿದ್ದಂತೆ. ವಿದೇಶ ಪರ್ಯಟನೆಯಲ್ಲಿ ಶೀಘ್ರದಲ್ಲೇ ನಾನೇ ಮೊದಲ ಸ್ಥಾನಕ್ಕೇರಿ ಅಸೂಯೆ ಪಡುವವರ ಆಸೆ ತೀರಿಸುತ್ತೇನೆ ಎಂದವರು ಇದೇ ಸಂದರ್ಭದಲ್ಲಿ ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ. 

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಬೈಲ್ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆ ಎಂಬಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ರೆಹಮತ್ ಎಂಬ ಮಹಿಳೆ ಸಾವನ್ನಪ್ಪಿದ್ದು ಅತಿ ದುಃಖದ ಸಂಗತಿಯಾಗಿದೆ. ಅಪಘಾತ ಹೇಗೇಯೇ ನಡೆದಿರಲಿ, ಸಾವು ನೋವು ಸಂಭವಿಸಬಾರದಿತ್ತು. ಮೃತಪಟ್ಟ ಮಹಿಳೆಯ ಪ್ರಾಣದ ಬೆಲೆ ಅವರ ಕುಟುಂಬಸ್ಥರಿಗೆ ಮಾತ್ರ ಗೊತ್ತು. 

ಅಪಘಾತದ ನಂತರ ಕೆಲವರು ರಸ್ತೆ ತಡೆದು ಪ್ರತಿಭಟಿಸಿ ಘಟನೆಯನ್ನ ರಾಜಕೀಯವಾಗಿ ಬಳಸಿದ್ದು ಅವರ ವ್ಯಕ್ತಿತ್ವಕ್ಕೆ ಸೂಕ್ತವಲ್ಲ. ಕೆಲವರಿಗೆ ಬದುಕಬೇಕಾದರೆ ಪ್ರತಿಭಟನೆ ಅನಿವಾರ್ಯ. ಇಲ್ಲದಿದ್ದರೆ ಅವರಿಗೆ ಬದುಕಲು ಅಸಾಧ್ಯ. ನಾವು ಬದುಕಲು ಹೇಗೆ ಆಹಾರ ಸೇವಿಸುತ್ತೇವೋ ಅದೇ ರೀತಿ ಅವರು ಬದುಕಲು ಪ್ರತಿಭಟನೆಗಳೇ ಆಹಾರವಾಗಿದೆ. ಅವರ ಅಸ್ತಿತ್ವ ಉಳಿಸಲು ಪ್ರತಿಭಟನೆಗಳನ್ನ ಮಾಡುತ್ತಾ ಇರುತ್ತಾರೆ. ಪ್ರತಿಭಟನೆಗಳು ಪ್ರಜಾಪ್ರಭುತ್ವ ದೇಶದ ಸೌಂದರ್ಯ. ಆದರೆ ಸಾವಿನಲ್ಲಿ ಮಾತ್ರ ಪ್ರತಿಭಟನೆಗಳ ನೆಪದಲ್ಲಿ ರಾಜಕೀಯ ಮಾಡಬೇಡಿ. ನಿಮ್ಮ ಸಮಸ್ಯೆ ಏನಿದ್ದರೂ ನನ್ನಲ್ಲಿ ಹೇಳಿ. ನಾನು ಅದನ್ನ ಬಗೆಹರಿಸದಿದ್ದರೆ ಟೀಕಿಸಿ. 

ಚೆಂಬುಗುಡ್ಡೆ ರಸ್ತೆ ದುರಸ್ತಿಗೆ ಮಳೆಗಾಲದ ಮೊದಲೇ ಅಧಿಕಾರಿಗಳಿಗೆ ಆದೇಶ ನೀಡಿದ್ದೆ. ಚೆಂಬುಗುಡ್ಡೆ ರಸ್ತೆ ಬದಿಯಲ್ಲಿ ಮರಗಳಿರುವುದರಿಂದ ಮಳೆ ನೀರು ರಸ್ತೆಗೆ ಸುರಿದು ಹೊಂಡಗಳು ಸೃಷ್ಟಿಯಾಗುತ್ತದೆ. ಇದು ನೈಸರ್ಗಿಕ ವಿಚಾರಗಳಾಗಿವೆ. ಮಳೆಗಾಲದಲ್ಲಿ ರಸ್ತೆಗೆ ಹಾಕಲು ಡಾಂಬರು ಸಿಗೋದಿಲ್ಲ. ರಸ್ತೆ ಗುಂಡಿಗಳಿಗೆ ಜಲ್ಲಿಕಲ್ಲು, ಜಲ್ಲಿ ಹುಡಿ ಹಾಕಲಾಗುತ್ತದೆ. ಮತ್ತೆ ಮಳೆ ಸುರಿದು ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿ ರಸ್ತೆ ಹದಗೆಟ್ಟಿದೆ ಎಂದರು.

ವಿದೇಶ ಸುತ್ತೋದರಲ್ಲಿ ಮೋದಿ ಬಳಿಕ ನನಗೆ ಎರಡನೇ ಸ್ಥಾನವನ್ನು ಟೀಕಾಕಾರರು ಕೊಟ್ಟಿದ್ದಾರೆ. ಜನರಿಂದ ಆಯ್ಕೆಯಾಗಿ ಸ್ಪೀಕರ್ ಆಗಿ ನನ್ನ ಕ್ಷೇತ್ರ, ರಾಜ್ಯ, ದೇಶದ ಪ್ರತಿನಿಧಿಯಾಗಿ ವಿದೇಶಕ್ಕೆ ಹೋಗಿದ್ದೇನೆ. ನಿಮಗೂ ಇಷ್ಟ ಇದ್ದರೆ ಜನರಿಂದ ಆಯ್ಕೆಯಾಗಿ ವಿದೇಶ ತಿರುಗಿ. ದೇಶ ಸುತ್ತೋದರಲ್ಲಿ ಇಷ್ಟರ ವರೆಗೆ ನಾನೇ ನಂಬರ್ ಒನ್ ಎನಿಸಿದ್ದೆ. ಆದರೆ ನನಗೆ ಎರಡನೇ ಸ್ಥಾನ ಕೊಟ್ಟಿದ್ದಾರೆ. ಅಧಿಕಾರ ಇರಲಿ, ಇಲ್ಲದೇ ಇರಲಿ ಆದಷ್ಟು ಶೀಘ್ರದಲ್ಲೆ ಪ್ರಥಮ ಸ್ಥಾನ ಗಳಿಸಿ ಅಸೂಯೆ ಪಡುವವರ ಆಸೆ ಈಡೇರಿಸುತ್ತೇನೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article