
ಮಾಯ್ ದೆ ದೇವುಸ್ ವಿದ್ಯಾ ಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆಯ ಕ್ರೀಡಾಕೂಟ-2024
ಪುತ್ತೂರು: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸದೃಢತೆಗೆ ಪ್ರಾಮುಖ್ಯತೆಯನ್ನು ನೀಡುವಂತೆ ಮಾಡಬೇಕು ಎಂದು ಪುತ್ತೂರಿನ ಶಾಸಕ ಅಶೋಕ್ ರೈ ಹೇಳಿದರು.
ಅವರು ಮಾಯ್ ದೆ ದೇವುಸ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನ.5 ಮತ್ತು 6 ರಂದು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಂಸ್ಥಾಪಕರ ದಿನಾಚರಣೆಯ ಕ್ರೀಡಾಕೂಟ-20024 ಇದರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ತನ್ನ ಮುಂದಿನ ಭವಿಷ್ಯವನ್ನು ಗಟ್ಟಿಗೊಳಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಎಳವೆಯಿಂದಲೇ ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವಂತೆ ಪ್ರೇರಣೆಯನ್ನು ನೀಡಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ಒಂದು ಸುಭದ್ರವಾದ ರಾಷ್ಟ್ರವನ್ನು ಕಟ್ಟುವಲ್ಲಿ ಸದೃಢವಾದ ಯುವಕರ ಅವಶ್ಯಕತೆ ಇದ್ದು, ಗುಣಮಟ್ಟದ ಶಿಕ್ಷಣದ ಜೊತೆಗೆ ಗುಣಮಟ್ಟದ ಆರೋಗ್ಯ ತುಂಬಾ ಮುಖ್ಯವಾಗಿದೆ. ಈ ದೇಶದ ಭವಿಷ್ಯ ಯುವ ಸಮೂಹ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಂತಿದೆ. ಈ ಕ್ರೀಡಾಕೂಟದ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಕ್ರೀಡಾ ಧ್ವಜಾರೋಹಣವನ್ನು ಮಾಡಿ ಮಾತನಾಡಿ, ಪ್ರತಿಯೊಬ್ಬರು ದೇವರ ಕೊಡುಗೆಗಳಾಗಿದ್ದೇವೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕು. ಈ ಕ್ರೀಡಾಕೂಟ ಸೌಹಾರ್ದತೆ ಮತ್ತು ಒಗ್ಗಟ್ಟಿನ ದ್ಯೋತಕವಾಗಿ ಮೂಡಿ ಬರಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಶರಣ್ ಜೆ. ಶೆಟ್ಟಿ ಹಾಗೂ ಪುತ್ತೂರಿನ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿರುವ ಜಾನ್ಸನ್ ಡಿ’ಸೋಜ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಬೋಧಕ ಬೋಧಕೇತರ ವರ್ಗ ಹಾಗೂ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು.
ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸೈಂಟ್ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸೈಂಟ್ ವಿಕ್ಟರ್ ಬಾಲಕಿಯರ ಪ್ರೌಢಶಾಲೆ, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಕಾಲೇಜು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಗುರು ರೆ. ಫಾ. ಮ್ಯಾಕ್ಸಿನ್ ಡಿ’ಸೋಜಾ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟಾ ವಂದಿಸಿ, ಶಿಕ್ಷಕಿ ಸವಿತಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.