
ಸಂತ ಫಿಲೋಮಿನಾ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ
ಪುತ್ತೂರು: ಪ್ರತಿಷ್ಠಿತ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು 53 ವರುಷಗಳ ಬಳಿಕ ಮತ್ತೊಮ್ಮೆ ವಿದ್ಯಾಸಂಸ್ಥೆಯಲ್ಲಿ ಜೊತೆಯಾಗುವ ಮೂಲಕ ತಮ್ಮ ವಿದ್ಯಾರ್ಥಿ ಜೀವನದ ಮಧುರ ನೆನಪುಗಳನ್ನು ಇತ್ತೀಚೆಗೆ ಹಂಚಿಕೊಂಡರು.
ಶಿವಶಂಕರ ಭಟ್ ಅವರ ಉತ್ಸಾಹದೊಡನೆ 1971ರಲ್ಲಿ ಬಿಎಸ್‌ಸಿ ಪದವಿಯಲ್ಲಿದ್ದ ಹತ್ತು ನಿಕಟ ಸ್ನೇಹಿತರಾದ ಕೃಷ್ಣ ಪ್ರಸಾದ್ ಭಂಡಾರಿ, ಜಯರಾಮ ಕೆದಿಲಾಯ, ಗೋಪಾಲಕೃಷ್ಣ ಶರ್ಮ, ವಿಲ್ಫ್ರೆಡ್ ಡಿಸೋಜ, ರಾಜಾರಾಂ ಭಟ್, ವೆಂಕಟರಮಣ ಭಟ್, ಮೊಯ್ದೀನ್ ಕುಂಜಿ, ವಿಜಯಕುಮಾರ್ ಟಿ ಮತ್ತು ಹರೀಶ್ ಶರ್ಮಾ ಅವರನ್ನು ಒಟ್ಟುಗೂಡಿಸಿತು.
ಕಾಲೇಜಿನ ಸಂಚಾಲಕ ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ, ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ ಹಾಗೂ ಕಾಲೇಜಿನ ಅಧ್ಯಾಪಕ ವೃಂದದವರು ಹಿರಿಯ ವಿದ್ಯಾರ್ಥಿಗಳನ್ನು ತುಂಬು ಗೌರವ ಮತ್ತು ಕಾಳಜಿಯಿಂದ ಸ್ವಾಗತಿಸಿದರು.
ಗೆಳೆಯರು ಪ್ರಯೋಗಾಲಯಗಳಲ್ಲಿ ಕಳೆದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಕಾಲೇಜಿನ ಪ್ರಗತಿಯನ್ನು ಕಂಡು ಬೆರಗಾಗುತ್ತಾ, ಗತಕಾಲದ ನೆನಪುಗಳ ಸವಿಯೊಡನೆ ಕಾಲಕಳೆದರು. ಇಂತಹ ಪ್ರತಿಷ್ಠಿತ ಸಂಸ್ಥೆಯ ಭಾಗವಾಗಿದ್ದಕ್ಕಾಗಿ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುವ ಮೂಲಕ ಕಾಲೇಜು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.