
ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ ಘಟಕದಿಂದ ಪ್ರಜ್ಞಾಶ್ರಮದಲ್ಲಿ ಎನ್.ಸಿ.ಸಿ. ದಿನಾಚರಣೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ಎನ್.ಸಿ.ಸಿ. ಘಟಕಗಳಾದ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ 5 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ನೌಕಾದಳ ವತಿಯಿಂದ ಪುತ್ತೂರಿನ ಬೀರಮಾಲೆಯಲ್ಲಿರುವ ಪ್ರಜ್ಞಾಶ್ರಮ ಮಾನಸಿಕ ವಿಕಲಚೇತನರ ವೃತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಎನ್.ಸಿ.ಸಿ. ದಿನಾಚರಣೆಯನ್ನು ಆಚರಿಸಲಾಯಿತು.
ವಿಶ್ವದ ಅತೀ ದೊಡ್ಡ ಸಮವಸ್ತ್ರದಾರಿತ ಯುವ ಸೈನ್ಯದಳ ಎನ್.ಸಿ.ಸಿ. ಆಗಿದ್ದು ತಮ್ಮ 76ನೇ ಎನ್.ಸಿ.ಸಿ. ದಿನಾಚರಣೆಯನ್ನು ಈ ವಿಶೇಷ ಕೇಂದ್ರದಲ್ಲಿ ಆಚರಿಸುವ ಮೂಲಕ ಸಾಮಾಜಿಕ ಸೇವೆ ಮತ್ತು ಸಮುದಾಯ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ಅಪಾರ ಎನ್ನುವ ಆಶಯದೊಂದಿಗೆ ಪ್ರಜ್ಞಾಶ್ರಮದ ಮಾನಸಿಕ ವಿಕಲಚೇತನರೊಂದಿಗೆ ತಮ್ಮ ಸಮಯವನ್ನು ಕಳೆದರು.
ಪರಿಸರ ಸಂರಕ್ಷಣೆಯಲ್ಲಿ ಎನ್.ಸಿ.ಸಿ. ಘಟಕಗಳು ಮುಂಚೂಣಿಯಲ್ಲಿದ್ದು ಎನ್.ಸಿ.ಸಿ. ದಿನಾಚರಣೆಯ ಅಂಗವಾಗಿ ಪ್ರಜ್ಞಾಶ್ರಮದ ಆವರಣದಲ್ಲಿ ಹಣ್ಣು ಹಂಪಲಿನ ಗಿಡಗಳನ್ನು ನೆಡಲಾಯಿತು.
ಎನ್.ಸಿ.ಸಿ. ಕೆಡೆಟ್‌ಗಳು ಎನ್.ಸಿ.ಸಿ. ದಿನಾಚರಣೆಯ ಅಂಗವಾಗಿ ಸಿಹಿ ತಿಂಡಿಯನ್ನು ಕೇಂದ್ರದಲ್ಲಿರುವರೊಡನೆ ಹಂಚಿಕೊಂಡು, ಕೆಡೆಟ್‌ಗಳು ತಂದ ದೈನಂದಿಕ ಸಾಮಗ್ರಿಗಳನ್ನು ಹಸ್ತಾಂತಿಸಿದರು.
ಪ್ರಜ್ಞಾಶ್ರಮದ ರೂವಾರಿಯಾಗಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಗಳು ಕೇಂದ್ರದ ಮಾಹಿತಿಯನ್ನು ನೀಡಿದರು. ಎನ್.ಸಿ.ಸಿ. ದಿನಾಚರಣೆಯನ್ನು ಈ ಕೇಂದ್ರದಲ್ಲಿ ಆಚರಿಸಿದ ಎನ್.ಸಿ.ಸಿ. ಕೆಡೆಟ್‌ಗಳಿಗೆ ಮತ್ತು ಕಾಲೇಜಿಗೆ ಧನ್ಯವಾದವನ್ನು ಸಮರ್ಪಿಸುವ ಜೊತೆಗೆ ಈ ವಿಶೇಷ ವ್ಯಕ್ತಿಗಳು ಸಮಾಜದಲ್ಲಿ ತಮ್ಮ ಗುರುತಿಸುವಿಕೆ ಮತ್ತು ಅವರ ವೃತಿ ಜೀವನವನ್ನು ತಿಳಿಹೇಳುವ ಕಾರ್ಯ ಒದಗಿದೆ ಎನ್ನುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ. ಅಶೋಕ್ ರಾಯನ್ ಕ್ರಾಸ್ತಾ ಇವರ ಮಾರ್ಗದರ್ಶನದಲ್ಲಿ ಕಾಲೇಜಿನ ಭೂದಳ ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತು ಕಾಲೇಜಿನ ನೌಕಾದಳ ಎನ್.ಸಿ.ಸಿ. ಅಧಿಕಾರಿ ತೇಜಸ್ವಿ ಭಟ್ ಇವರ ಮುಂದಾಳತ್ವದಲ್ಲಿ ಎನ್.ಸಿ.ಸಿ. ದಿನಾಚರಣೆಯನ್ನು ಸಂಭ್ರಮದಲ್ಲಿ ಆಚರಿಸಲಾಯಿತು.
19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಮಡಿಕೇರಿಯ ಹವಾಲ್ದಾರ್ ಅನುಜ್ ತಾಪ, ಭಾರತೀಯ ಭೂಸೇನಾ ಯೋಧರು ಉಪಸ್ಥಿತರಿದ್ದರು. ಕಾಲೇಜಿನ ಭೂದಳ ಮತ್ತು ನೌಕಾದಳ ಎನ್.ಸಿ.ಸಿ. ಕೆಡೆಟ್‌ಗಳು ಪ್ರಜ್ಞಾಶ್ರಮದ ವಿಶೇಷ ವ್ಯಕ್ತಿಗಳೊಂದಿಗೆ ಮನೋರಂಜನಾ ಕಾರ್ಯಗಳನ್ನು ಆಯೋಜನೆ ಮಾಡುವ ಮೂಲಕ ಎನ್.ಸಿ.ಸಿ. ದಿನಾಚರಣೆಯನ್ನು ಆಚರಿಸಿದರು.