
ಸಂತ ಫಿಲೋಮಿನಾ ಕಾಲೇಜಿನಲ್ಲಿ ಫಿಲೋ ಚಿತ್ತಾರ: ಕಲಾ ವೈಭವ
ಪುತ್ತೂರು: ‘ಹೊಸತನ್ನು ಕಲಿಯಲು ಪ್ರೇರೇಪಿಸುವುದೇ ಕಲೆ. ಕಲೆ ನಿಮ್ಮ ತಾಳ್ಮೆಯನ್ನು ಬೆಳೆಸಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಬದುಕಿನಲ್ಲಿ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಸಂತ ಫಿಲೋಮಿನಾ ಕಾಲೇಜು ನನ್ನ ವಿದ್ಯಾರ್ಥಿ ಬದುಕಿನಲ್ಲಿ ನೀಡಿದ ಪ್ರೋತ್ಸಾಹ ಮರೆಯುವಂತಿಲ್ಲ’ ಎಂದು ಮಂಗಳೂರಿನ ಕಲಾ ಶಾಲೆಯ ಸಂಸ್ಥಾಪಕ, ಖ್ಯಾತ ವಯೋಲಿನಿಸ್ಟ್ ವಿದ್ವಾನ್ ವಿಶ್ವಾಸ್ ಕೃಷ್ಣ ಅವರು ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ನಡೆದ ‘ಫಿಲೋ ಚಿತ್ತಾರ: ಕಲಾ ದಿನ ಮತ್ತು ಕಲಾ ಪ್ರದರ್ಶನ’ವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕ ಅತೀ ವಂದನೀಯ ಫಾ. ಲಾರೆನ್ಸ್ ಮಸ್ಕರೇನಸ್ ಅವರು ‘ಕಲೆ ಅಂತರಂಗದ ಭಾಷೆ. ಅದರಲ್ಲೊಂದು ಅಧ್ಯಾತ್ಮಿಕತೆಯಿದೆ. ಬದುಕಿಗೆ ಉತ್ಸಾಹ ಚೈತನ್ಯ ತುಂಬುವುದೇ ಕಲೆ. ಆ ಅಭಿರುಚಿ ನಮ್ಮೊಳಗೆ ಮೂಡಲಿ’ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ‘ಪ್ರತಿಯೊಬ್ಬರಲ್ಲೂ ಶಕ್ತಿಯಿದೆ ಮತ್ತು ಈ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಪರಿಶ್ರಮವು ತ್ರಾಸದಾಯಕವಾಗಿದ್ದರೂ ಸಾಮರ್ಥ್ಯವನ್ನು ಅಭಿವ್ಯಕ್ತಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡಿ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ‘ಕಾವ್ಯ ಕುಂಚ ನೃತ್ಯ ಗಾಯನ’ ಕಾರ್ಯಕ್ರಮ ನಡೆಯಿತು. ಜೊತೆಗೆ ವಿದ್ಯಾರ್ಥಿಗಳಲ್ಲಿ ಅಡಗಿದ ಸುಪ್ತ ಪ್ರತಿಭೆಯ ಪ್ರದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಚಿತ್ರಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಾನವಿಕ ವಿಭಾಗದ ಮುಖ್ಯಸ್ಥ ಡಾ. ನೋರ್ಬರ್ಟ್ ಮಸ್ಕರೇನಸ್, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ತೃತೀಯ ಬಿಸಿಎಯ ದಿಲೀಪ್, ಉಪ ಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಯರಾಜ್ ಭಂಡಾರಿ, ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ. ಮಾಲಿನಿ ಕೆ, ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ಸಹ ಸಂಯೋಜಕರಾದ ಸುರಕ್ಷಾ ರೈ, ಪೂಜಶ್ರೀ ರೈ ಮತ್ತು ಡಾ. ಮೈತ್ರಿ ಭಟ್ ಅವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಯಕ್ಷಕಲಾ ಕೇಂದ್ರದ ನಿರ್ದೇಶಕ ಪ್ರಶಾಂತ್ ರೈ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ತನುಜಾ ವಂದಿಸಿ, ತೃತೀಯ ಬಿಎಸ್ಸಿಯ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.