
ಆಚರಣೆಗಳು ಮೌಲ್ಯಯುತವಾಗಿರಲಿ: ಡಾ. ಶೇಷಪ್ಪ ಕೆ.
ಪುತ್ತೂರು: ‘ಪ್ರಸ್ತುತ ದಿನಗಳಲ್ಲಿ ಮೌಲ್ಯಭರಿತ ಪರಿಸರ ಬಹಳ ಮುಖ್ಯ. ಅಂತೆಯೇ ನಮ್ಮ ಕಾರ್ಯಚಟುವಟಿಕೆಗಳು ಮೌಲ್ಯಯುತವಾಗಿರಲಿ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕ ಡಾ. ಶೇಷಪ್ಪ ಕೆ. ಹೇಳಿದರು.
ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕವು ಆಯೋಜಿಸಿದ ಎನ್ಎಸ್ಎಸ್ ವಾರ್ಷಿಕ ಫೆಸ್ಟ್ ‘ಫಿಲೋ ಸೇವಾಮೃತ’ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ‘ಸೇವೆಯ ಮೂಲಕ ಸಮಾಜದಲ್ಲಿ ಅರಿವೆಂಬ ಬೆಳಕನ್ನು ಮೂಡಿಸಬೇಕು. ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಬೇಕು. ಜವಾಬ್ದಾರಿಯುತ ಸೇವೆ ನೀಡುವ ಎನ್ಎಸ್ಎಸ್ ಬದುಕನ್ನು ರೂಪಿಸುತ್ತದೆ ಹಾಗೂ ಜಗತ್ತನ್ನು ಬೆಳಗುತ್ತದೆ’ ಎಂದರು.
ಎನ್ಎಸ್ಎಸ್ ಫೆಸ್ಟ್ನ ಅಂಗವಾಗಿ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.
ಎನ್ಎಸ್ಎಸ್ ಅಧಿಕಾರಿ ಡಾ. ಚಂದ್ರಶೇಖರ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ, ಎನ್ಎಸ್ಎಸ್ ಅಧಿಕಾರಿ ಪುಷ್ಪ ಎನ್. ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈ ಉಪಸ್ಥಿತರಿದ್ದರು.
ಎನ್ಎಸ್ಎಸ್ ಘಟಕದ ಗೀತಾ ಕೆ.ವಿ., ನಿರಂಜನ್ ಕುಮಾರ್, ಆಕಾಶ್ ರೈ, ಕಾವ್ಯ, ಅರ್ಚನಾ, ವಿಷ್ಣುಜಿತ್ ಸಹಕರಿಸಿದರು.