ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ: ಡಾ. ಮೈತ್ರಿ ಭಟ್
Saturday, November 2, 2024
ಪುತ್ತೂರು: ಜಗತ್ತು ಭಾವನಾತ್ಮಕತೆಯಿಂದ ಬೌದ್ಧಿಕತೆಯತ್ತ ಸಾಗುತ್ತಿದೆ. ಯುವ ಮನಸ್ಸುಗಳು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಬದುಕಿನ ಸಂದಿಗ್ಧತೆಗಳಿಂದ ಹೊರಬರಬೇಕಿದೆ ಎಂದು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಮೈತ್ರಿ ಭಟ್ ಹೇಳಿದರು.
ಅವರು ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘವು ಆಯೋಜಿಸಿದ್ದ ‘ಪರಿಸರ ಮತ್ತು ಮಾನವಪ್ರಜ್ಞೆ’ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಆಂತರಿಕ ಪ್ರಕ್ಷುಬ್ಧತೆಯಿಂದಾಗಿ ಮನುಷ್ಯ ಬಾಹ್ಯ ಅಡಚಣೆಯನ್ನು ಉಂಟುಮಾಡುತ್ತಾನೆ. ಮೌನವಾಗಿರುವವನು ತನ್ನ ಆಂತರಿಕ ಶಾಂತತೆಯನ್ನು ಪ್ರತಿಬಿಂಬಿಸುತ್ತಾನೆ. ಹೀಗಾಗಿ ನಿಮ್ಮ ಪರಿಸರವನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ. ಮೈತ್ರಿ ಭಟ್ ಮಾನವ ಪ್ರಜ್ಞೆಯ ಮೇಲೆ ಪರಿಸರದ ಪ್ರಭಾವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಈ ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್ ಮೊಳೆಯಾರ ಉಪಸ್ಥಿತರಿದ್ದರು.
ವಿದ್ಯಾರ್ಥಿ ಯಜ್ಞೇಶ್ ಸ್ವಾಗತಿಸಿ, ಐಶ್ವರ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಆಶಿಕಾ ವಂದಿಸಿ, ಅಖಿಲಾ ಕಾರ್ಯಕ್ರಮವನ್ನು ನಿರೂಪಿಸಿದರು.