
ಮನೆಗೆ ನುಗ್ಗಿದ ಖಾಸಗಿ ಬಸ್- ಮನೆ ಮಂದಿ ಅಪಾಯದಿಂದ ಪಾರು
ಪುತ್ತೂರು: ಶಾಲಾ ಬಸ್ಸಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಬಸ್ಸು ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿದ ಘಟನೆ ಗುರುವಾರ ಕಾವು ಸಮೀಪದ ಅಮ್ಮಿನಡ್ಕ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಆದರೆ ಮನೆಯಲ್ಲಿ ಇದ್ದವರು ಓಡಿ ತಪ್ಪಿಸಿಕೊಂಡ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.
ಅಪಘಾತವು ಸುಳ್ಯ ಪುತ್ತೂರು ರಸ್ತೆಯ ಅಮ್ಮಿನಡ್ಕ ಬಳಿ ಸಂಭವಿಸಿದೆ. ಮದುವೆಗೆ ತೆರಳುವ ಪ್ರಯಾಣಿಕರನ್ನು ಕೊಂಡು ಹೋಗುತ್ತಿದ್ದ ಬಸ್ಸು ಪುತ್ತೂರಿನಿಂದ ಸುಳ್ಯದ ಕಡೆಗೆ ಹೋಗುತಿತ್ತು. ಮಧುರ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿದ ಬಸ್ಸು ಸುಳ್ಯದಿಂದ ಪೆರ್ಲಂಪಾಡಿಗೆ ಮಕ್ಕಳನ್ನು ಕರೆದುಕೊಂಡು ಬರಲು ತೆರಳುತಿತ್ತು. ಅದು ಅಮ್ಮಿನಡ್ಕ ಬಳಿ ಪೆರ್ಲಂಪಾಡಿ ಕಡೆಗೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಮದುವೆ ಬಸ್ಸು ಬಂದಿದ್ದು. ಅದರ ಚಾಲಕ ಸ್ಕೂಲ್ ಬಸ್ಸಿಗೆ ಢಿಕ್ಕಿ ಹೊಡೆಯುವದನ್ನು ತಪ್ಪಿಸಲು ಇನ್ನೊಂದು ಬದಿಗೆ ವಾಹನವನ್ನು ತಿರುಗಿಸಿದ್ದಾರೆ. ಶಾಲಾ ಮಕ್ಕಳ ಬಸ್ ಚಾಲಕ ಮಾಡಿದ ಅವಾಂತರದಿಂದ ಈ ಘಟನೆ ನಡೆದಿದ್ದು, ಖಾಸಗಿ ಬಸ್ಸು ಬರುತ್ತಿರುವುದನ್ನು ಕಂಡರೂ ಶಾಲಾ ಬಸ್ ಚಾಲಕ ಸಡನ್ ಆಗಿ ತಿರುವು ಪಡೆದುಕೊಂಡಿರುವುದೇ ಈ ಘಟನೆಗೆ ಕಾರಣವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿದೆ. ಬಸ್ಸಿನಲ್ಲಿದ್ದವರ ಪೈಕಿ ಕೆಲವರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.