ಪರಶುರಾಮ ಥೀಂಪಾರ್ಕ್: ಕಾಮಗಾರಿ ಹಸ್ತಾಂತರವಾಗದೇ ತನಿಖೆ

ಪರಶುರಾಮ ಥೀಂಪಾರ್ಕ್: ಕಾಮಗಾರಿ ಹಸ್ತಾಂತರವಾಗದೇ ತನಿಖೆ


ಉಡುಪಿ: ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗುತ್ತಿದ್ದ ಪರಶುರಾಮ ಮೂರ್ತಿ ಹಾಗೂ ಥೀಮ್ ಪಾರ್ಕ್ ಬಗ್ಗೆ ಸುಳ್ಳುಗಳನ್ನು ಪೋಣಿಸಿ ಕಾಂಗ್ರೆಸ್ ವಿವಾದ ಎಬ್ಬಿಸಿ, ಪ್ರವಾಸೋದ್ಯಮದ ಕಗ್ಗೊಲೆ ನಡೆಸಿದೆ ಎಂದು ಶಾಸಕ ಸುನಿಲ್ ಕುಮಾರ್ ಕಿಡಿಕಾರಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಶುರಾಮ ಮೂರ್ತಿಯ ವಿನ್ಯಾಸ ಬದಲಿಸಲು ಶಿಲ್ಪಿ ಜಿಲ್ಲಾಡಳಿತದ ಅನುಮತಿ ಪಡೆದು, ಕಾರ್ಯಾರಂಭ ಮಾಡಲು ಹೊರಟಾಗ ಕಳೆದ ಚುನಾವಣೆಯಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ದಾರಿಗೆ ಮಣ್ಣು ಹಾಕಿ ಸ್ಥಳಾಂತರ ಮಾಡದಂತೆ ಮಾಡಿದ್ದಾರೆ. ರಾಜಕೀಯ ದ್ವೇಷದಿಂದ ಅಭಿವೃದ್ಧಿಗೆ ತಡೆಯೊಡ್ಡುತ್ತಿರುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಎಬ್ಬಿಸಿರುವ ವಿವಾದದ ಬಗ್ಗೆ ಈಗಾಗಲೇ ತನಿಖೆ ನಡೆಸಿ ಎಂದು ನಾನೇ ಹೇಳಿದ್ದೇನೆ. ಬರೋಬ್ಬರಿ ಒಂದು ವರ್ಷದಿಂದ ಕಾಮಗಾರಿ ಸ್ಥಗಿತವಾಗಿದೆ. ಅದಕ್ಕೆ ಕಾಂಗ್ರೆಸ್ ಹೊಣೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು, ಯೋಜನೆಗೆ ಪೂರ್ಣಗೊಳ್ಳಲು ಬಾಕಿ ಇರುವ ಮೊತ್ತವನ್ನು ಕಾಂಗ್ರೆಸ್ ಸರಕಾರವೇ ಬಿಡುಗಡೆ ಮಾಡಬೇಕಿದೆ. ಆದರೆ, ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ, ಕಾಂಗ್ರೆಸ್ ಪ್ರೇರಿತ ತನಿಖೆ ನಡೆಯುತ್ತಿದೆ. ಅನುದಾನ ಬಿಡುಗಡೆ ಮಾಡುವಂತೆ ಕಾಮಗಾರಿ ವಿರೋಧಿಸುತ್ತಿರುವವರೂ ಹೇಳುತ್ತಿಲ್ಲ ಎಂದು ಆರೋಪಿಸಿದರು.

ಸರಕಾರಿ ಕಾಮಗಾರಿಗಳಲ್ಲಿ ಸಂಬಂಧಿಸಿದ ಇಲಾಖೆ ದೂರು ನೀಡಿದರೆ ಕಾಮಗಾರಿ ಬಗ್ಗೆ ತನಿಖೆಯಾಗುವುದು ಸಾಮಾನ್ಯ. ಆದರೆ ಖಾಸಗಿ ವ್ಯಕ್ತಿ ನೀಡಿದ ದೂರಿಗೆ ಎಫ್.ಐ.ಆರ್ ಆಗಿ, ಅದೇ ವ್ಯಕ್ತಿ ಮಹಜರು ಪ್ರಕ್ರಿಯೆಗೆ ತೆರಳಿದ್ದಾರೆ. ಪೋಲಿಸ್ ಇಲಾಖೆ ಕಾಂಗ್ರೆಸ್ ಪ್ರಾಯೋಜಿತ ತನಿಖೆ ನಡೆಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದವರು ಹೇಳಿದರು.

ಒಟ್ಟು 11 ಕೋಟಿ ರೂ ಕಾಮಗಾರಿಯಲ್ಲಿ 6 ಕೋಟಿ ರೂ ಬಿಡುಡೆಯಾಗಿದ್ದು, 4 ಕೋಟಿ ರೂ ಬಾಕಿ ಇದೆ. ಈ ಮೊತ್ತವನ್ನು ಬಿಡುಗಡೆ ಮಾಡಲಿ ಎಂದು ಕಾಂಗ್ರೆಸಿನ ಪರಾಜಿತ ಅಭ್ಯರ್ಥಿ ಯಾಕೆ ಹೇಳುವುದಿಲ್ಲ. ವಿಷ ನೀಡಿ ಪತಿಯನ್ನು ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು 3 ದಿನ ಪೋಲಿಸ್ ಕಸ್ಟಡಿಗೆ ಪಡೆಯುವ ಅವರು, ಅಮಾಯಕ ಶಿಲ್ಪಿಯನ್ನು 6 ದಿನ ಯಾಕೆ ಕಸ್ಟಡಿಗೆ ಪಡೆದಿದ್ದಾರೆ ಎಂದು ಪ್ರಶ್ನಿಸಿದರು.

ಜೀವಂತ ಇರುವಾಗಲೇ ಕಾಂಗ್ರೆಸಿನ ನಾಯಕರಾದ ವೀರಪ್ಪ ಮೊಯ್ಲಿ ಹಾಗು ಗೋಪಾಲ ಭಂಡಾರಿಯವರ ಶವಯಾತ್ರೆ ನಡೆಸಿದ ನಾಯಕನಿಂದ ಕಾರ್ಕಳದ ಅಭಿವೃದ್ಧಿ ಸಾಧ್ಯವೇ? ಇನ್ನಾದರೂ ಕಾರ್ಕಳದ ಅಭಿವೃದ್ಧಿಗೆ ತಡೆಯೊಡ್ಡದೇ, ದುರುದ್ದೇಶದ ರಾಜಕೀಯ ಮಾಡದಿರಿ ಎಂದರು.

ಪರಶುರಾಮ ಮೂರ್ತಿ ಬಗ್ಗೆ ಆರೋಪಿಸುತ್ತಿರುವ ಪರಾಜಿತ ಅಭ್ಯರ್ಥಿಯೂ ಗುತ್ತಿಗೆದಾರರಾಗಿದ್ದು, ಅವರ ಕಳಪೆ ಕಾಮಗಾರಿಯ ಬಗ್ಗೆ 100 ದೂರುಗಳನ್ನು ಕೊಡಬಲ್ಲೆ. ಮೂರ್ತಿ ಫೈಬರ್ ಅಲ್ಲ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಫೈಬರ್ ಉದಯ್ ಅವರಿಗೆ ಥೀಮ್ ಪಾರ್ಕ್ ಕಲ್ಪನೆಯೇ ಇಲ್ಲ. ಹೀಗಾಗಿ ಅದಕ್ಕೆ ಧಾರ್ಮಿಕತೆಯ ಲೇಪನ ನೀಡಿ ಜನರ ಭಾವನೆಗಳ ಜೊತೆ ರಾಜಕೀಯ ಮಾಡಲು ಹೊರಟಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಬೈಲೂರು ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಬೈಲೂರು, ಕಾರ್ಕಳ ತಾ. ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ, ಯರ್ಲಪಾಡಿ ಗ್ರಾ.ಪಂ. ಅಧ್ಯಕ್ಷ ಸುನಿಲ್ ಹೆಗ್ಡೆ, ಬೈಲೂರು ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಪೂಜಾರಿ, ನೀರೆ ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, ಪರಶುರಾಮ ಥೀಮ್ ಪಾರ್ಕ್ ಹೋರಾಟ ಸಮಿತಿ ಅಧ್ಯಕ್ಷ ಸಂತೋಷ್, ಗುರುರಾಜ್ ಮಾಡ, ರಾಕೇಶ್ ಶೆಟ್ಟಿ ಕುಕ್ಕುಂದೂರು ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article