
ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವಿಕ್ರಮ್ ಗೌಡ
ಉಡುಪಿ: ಸೋಮವಾರ ರಾತ್ರಿ ನಕ್ಸಲ ನಿಗ್ರಹ ದಳ ಪೊಲೀಸರ ಗುಂಡಿಗೆ ಬಲಿಯಾದ ವಿಕ್ರಮ್ ಗೌಡ (46) ಬಡತನದಲ್ಲಿ ಬೆಳೆದ ಹುಡುಗ. ಈಗಿನ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ. ಕಲಿತದ್ದು ಕೇವಲ 4ನೇ ತರಗತಿ. ಬಳಿಕ ಮುಂಬೈಗೆ ತೆರಳಿ ಹೋಟೆಲ್ ಕಾರ್ಮಿಕನಾಗಿದ್ದ. ಬಳಿಕ ಊರಿಗೆ ಬಂದು ನೆಲೆಸಿ ಮರ ವ್ಯಾಪಾರ ಮಾಡುತ್ತಿದ್ದ ಆತನನ್ನು ಅನಿತಾ ಅರೆಕಲ್ ಎಂಬ ಅರಣ್ಯಾಧಿಕಾರಿ ಬಂಧಿಸಿ, ಶಿಕ್ಷೆ ವಿಧಿಸಿದ್ದರು. ಮೂಲತಃ ಸಾಧು ಸ್ವಭಾವದವನಾಗಿದ್ದ ವಿಕ್ರಮ್ ತಂದೆ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ತಾಯಿ ಸುಶೀಲ ಅನಾರೋಗ್ಯಪೀಡಿತರಾಗಿ ಸಾವನ್ನಪ್ಪಿದ್ದರು. ವಿಕ್ರಮ್ ಸಹೋದರಿ ಪ್ರಸ್ತುತ ತೀರ್ಥಹಳ್ಳಿಯ ಮೇಗದ್ದೆಯಲ್ಲಿದ್ದಾರೆ. ಬಿಜೆಪಿ ನಾಯಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರ ಜಾಗದಲ್ಲಿ ವಾಸವಾಗಿದ್ದರು. ಕಳೆದ ಸುಮಾರು 10 ವರ್ಷಗಳ ಹಿಂದೆ ತಿಂಗಳೆಯವರ ಮನೆಗೆ ದಾಳಿ ನಡೆಸಿದ್ದ.
ಬಳಿಕ ಕರ್ನಾಟಕ ವಿಮೋಚನಾ ರಂಗಕ್ಕೆ ಸೇರ್ಪಡೆಗೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವ ವಿರೋಧಿ ಹೋರಾಟದ ಮೂಲಕ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ.
ನಕ್ಸಲರ ನೇತ್ರಾವತಿ ದಳದ ನಾಯಕ ವಿಕ್ರಮ್ ಗೌಡ, ಮೆಲನಾಡಿನಲ್ಲಿ ಸಕ್ರಿಯವಾಗಿದ್ದ ಮುಂಡಗಾರು ಲತಾ ತಂಡದೊಂದಿಗೆ ಗುರುತಿಸಿಕೊಂಡಿದ್ದ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವವನ್ನು ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ಕರ್ನಾಟಕದಲ್ಲಿ ವಿಕ್ರಮ್ ಗೌಡ ನಾಯಕನಾಗಿದ್ದ. ಆತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು. ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೆ ವಿಕ್ರಂ ಗೌಡ ವಿರೋಧ ಹೊಂದಿದ್ದ. ಅಷ್ಟೇ ಅಲ್ಲದೇ ಆ ಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರ ಹಂಚಿದ್ದ.
ಕಳೆದ ಸುಮಾರು 18 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ನಿರತನಾಗಿರುವ ವಿಕ್ರಮ್ ಗೌಡ ಪತ್ತೆಗೆ ಸರ್ಕಾರ ಶ್ರಮಿಸಿತ್ತು. ಕಳೆದ 2 ವರ್ಷದ ಹಿಂದೆ ಶೃಂಗೇರಿ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ವಿಕ್ರಮ್ ಗೌಡ ಹತನಾಗಿದ್ದ ಎಂದು ಹೇಳಲಾಗಿತ್ತಾಗಿದ್ದರೂ ವಾಸ್ತವಾಗಿ ಆತ ಹತನಾಗಿರಲಿಲ್ಲ. ವಿಕ್ರಮ್ ಗೌಡ ಸಹಿತ ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ ಮತ್ತು ಸುಂದರಿ ಪತ್ತೆಗೆ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.
ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳು ಹಾಗೂ ಚಿಕ್ಕಮಗಳೂರಿನ ಹಲವೆಡೆ ಇತ್ತೀಚೆಗೆ ನಕ್ಸಲರು ಸಭೆ ನಡೆಸಿದ್ದರು. ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ಸಂಬಂಧ ಸಭೆ ನಡೆಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹಾಗಾಗಿ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ನಕ್ಸಲ್ ನಿಗ್ರಹ ಪಡೆಯಿಂದ ಕಾರ್ಯಾಚರಣೆಯೂ ಮುಂದುವರಿದಿದೆ.