ಮೋಸ್ಟ್ ವಾಂಟೆಡ್ ವಿಕ್ರಮ್ ಗೌಡ ಮೃತ: ಡಿಜಿಪಿ ರೂಪಾ ದೃಢ

ಮೋಸ್ಟ್ ವಾಂಟೆಡ್ ವಿಕ್ರಮ್ ಗೌಡ ಮೃತ: ಡಿಜಿಪಿ ರೂಪಾ ದೃಢ


ಉಡುಪಿ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಪೀತಬೈಲು ಎಂಬಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್, ಕೂಡ್ಲುವಿನ ವಿಕ್ರಂ ಗೌಡ (46) ಮೃತಪಟ್ಟಿರುವುದಾಗಿ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ರೂಪಾ ಡಿ. ತಿಳಿಸಿದ್ದಾರೆ.

ಮಂಗಳವಾರ ಎನ್‌ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಹತನಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದರು

ವಿಕ್ರಂ ಗೌಡ ವಿರುದ್ಧ ಕೇರಳದಲ್ಲಿ 19 ಸೇರಿದಂತೆ ಕೊಲೆ, ಸುಲಿಗೆ ಸಂಬಂಧ ಒಟ್ಟು 61 ಪ್ರಕರಣ ದಾಖಲಾಗಿವೆ. ನಕ್ಸಲ್ ನಿಗ್ರಹ ಪಡೆ ಪೊಲೀಸ್ ಅಧೀಕ್ಷಕ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಅರಣ್ಯದಲ್ಲಿ ಸತತ 10 ದಿನಗಳಿಂದ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ನ.10ರಿಂದ ನಿರಂತರ ಪ್ರಯತ್ನ ಜಾರಿಯಲ್ಲಿತ್ತು. ನಕ್ಸಲರ ಬಗ್ಗೆ ಮಾಹಿತಿ ಕಲೆಹಾಕಿ ಯಶಸ್ವಿ ಕಾರ್ಯಾಚರಣೆ ನಡೆಸಿರುವುದಾಗಿ ರೂಪಾ ತಿಳಿಸಿದರು.

ಆಂತರಿಕ ವಿಭಾಗದ ಡಿಜಿಪಿ ಗಣಮೋಹನ್ ಇತ್ತೀಚೆಗೆ ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದರು. ಕಾರ್ಯಾಚರಣೆ ಗುಪ್ತಚರ ವಿಭಾಗ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಡೆದಿದ್ದು, ವಿಕ್ರಮ್ ಹತ್ಯೆ ಎಎನ್‌ಎಫ್ ಕಿರೀಟಕ್ಕೆ ಸಂದ ಗರಿ ಎಂದು ಬಣ್ಣಿಸಿದರು.

ಎಎನ್‌ಎಫ್ 2005ರ ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿದ್ದು, ಆ ಬಳಿಕ ನಡೆದ ನಾಲ್ಕನೇ ಎನ್‌ಕೌಂಟರ್ ಇದಾಗಿದೆ. ವಿಕ್ರಂ ಗೌಡ ಜೊತೆಗೆ ಇನ್ನೂ ಐದಾರು ಮಂದಿ ಇದ್ದಾರೆ. ಅವರು ಹೇಗೆ ಮುಂದೆ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ನಮ್ಮ ಕೂಂಬಿಂಗ್ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಡಿಜಿಪಿ ರೂಪಾ ತಿಳಿಸಿದರು.

ಈ ಕಾರ್ಯಾಚರಣೆಗೆ ಬೆಂಗಳೂರಿನ ಕೆಎಸ್‌ಐಎಸ್‌ಎಫ್‌ನ 75 ಮತ್ತು ಶಿವಮೊಗ್ಗದಿಂದ 25 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ವಿಕ್ರಂ ಗೌಡ ನಕ್ಸಲರ ಕಬಾನಿ ದಳಂ 2 ಎಂಬ ತಂಡವನ್ನು ಮುನ್ನಡೆಸುತ್ತಿದ್ದ ಎಂದವರು ಮಾಹಿತಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article