ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಜನಮನ ಸೆಳೆದ ವಸ್ತು ಪ್ರದರ್ಶನ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಜನಮನ ಸೆಳೆದ ವಸ್ತು ಪ್ರದರ್ಶನ


ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಪ್ರಯುಕ್ತ ಪ್ರೌಢ ಶಾಲಾ ಆವರಣದಲ್ಲಿ ರಾಜ್ಯ ಮಟ್ಟದ 45ನೇ ವರ್ಷದ ವಸ್ತು ಪ್ರದರ್ಶನ ನ.26 ರಂದು ಪೂರ್ವಾಹ್ನ ಆರಂಭಗೊಂಡಿದ್ದು, ಸುಮಾರು 318 ವ್ಯಾಪಾರ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಲು ಸಜ್ಜಾಗಿವೆ. 

ಮೊದಲ ದಿನವೇ ಬಿರುಸಿನ ವಹಿವಾಟು ನಡೆಸಿವೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೈದರಾಬಾದ್ ಯೂನಿಸೆಫ್ ಕಚೇರಿಯ ಮುಖ್ಯಸ್ಥ ಇಥಿಯೋಪಿಯದ ಡಾ. ಝುಲಾಲೆಮ್ ಬಿರಹಾನು ಟಾಪಿ ಅವರ ಉಪಸ್ಥಿತಿಯಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ನ.26 ರಿಂದ 30ರ ವರೆಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಆವರಣದಲ್ಲಿ ವಸ್ತುಪ್ರದರ್ಶನ ನಡೆಯಲಿದ್ದು, ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿಕೈಗಾರಿಕೆಗಳಿಗೆ ಸಂಬಂಧಿಸಿದ ವ್ಯಾಪಾರ ಮಳಿಗೆಗಳು ಜನರನ್ನು ಆಕರ್ಷಿಸುತ್ತವೆ. ಜತೆಗೆ ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಂಗೀತ, ನೃತ್ಯ, ಯಕ್ಷಗಾನ, ವೈವಿಧ್ಯಮಯ ಕಾರ್ಯಕ್ರಮಗಳು ಪ್ರತಿ ಸಂಜೆ 6ರಿಂದ ರಾತ್ರಿ 10ರವರೆಗೂ ವೈವಿಧ್ಯಮಯ ಮನರಂಜನೆ ನೀಡಲಿವೆ. ಉಚಿತ ಪ್ರವೇಶಾವಕಾಶವಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಹಾಗೂ ಜ್ಞಾನ, ಮನರಂಜನೆಯನ್ನೊದಗಿಸುತ್ತವೆ.

ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಬ್ಯಾಂಕ್‌ಗಳು, ಸರಕಾರಿ ಮಳಿಗೆಗಳು, ಧಾರ್ಮಿಕ ಮಳಿಗೆಗಳು, ಜೀವ ವಿಮೆ, ಅಂಚೆ ಇಲಾಖೆ, ಪುಸ್ತಕ ಮಳಿಗೆಗಳು, ವಾಹನ ಮಳಿಗೆ, ಕೃಷಿ ಉಪಕರಣ, ರುಡ್‌ಸೆಟ್ ಬಜಾರ್, ಶಿಕ್ಷಣ ಸಂಸ್ಥೆಗಳು, ಧರ್ಮೋತ್ಥಾನ ಟ್ರಸ್ಟ್, ಕೃಷಿ ಉತ್ಪನ್ನಗಳು, ಮಂಜುವಾಣಿ ಪತ್ರಿಕೆ ಹಾಗೂ ಎಸ್‌ಡಿಎಂ ಟ್ರಸ್ಟ್ ಪ್ರಕಟಣೆಗಳು, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ, ಎಸ್‌ಡಿಎಂ ಆಸ್ಪತ್ರೆ, ಗ್ರಾಮಾಭಿವೃದ್ಧಿ ಯೋಜನೆಯ ಪರಿಚಯ ಮಳಿಗೆ, ಸಿರಿ ಗ್ರಾಮೋದ್ಯೋಗ ಉತ್ಪನ್ನಗಳು, ನರ್ಸರಿ, ಫ್ಯಾನ್ಸಿ ಐಟಂಗಳು, ಕರಕುಶಲ ವಸ್ತುಗಳು, ತರಕಾರಿ ಬೀಜಗಳು, ವಸ್ತ್ರ ಮಳಿಗೆಗಳು, ತಿಂಡಿ ತಿನಿಸುಗಳು, ಗೀಸರ್ ಪ್ರದರ್ಶನ, ಅಗರಬತ್ತಿಗಳು, ಇನ್ವರ್ಟರ್ ಸಿಸ್ಟಮ್, ಇಲೆಕ್ಟ್ರಾನಿಕ್ ವಸ್ತುಗಳು, ಆಯುರ್ವೇದಿಕ್ ಉತ್ಪನ್ನಗಳು, ಸೆಗಣಿಯಿಂದ ತಯಾರಾದ ಪೈಂಟ್, ಅಗ್ರಿಲೀಫ್ ಹಾಳೆತಟ್ಟೆ ಉತ್ಪನ್ನಗಳು, ಅಕ್ವೇರಿಯಂ, ಸಿಲ್ವೆರಿಯಾ ಆಭರಣಗಳು, ಸಿರಿಧಾನ್ಯ ಉತ್ಪನ್ನಗಳು, ತಾಮ್ರದ ವಸ್ತುಗಳು, ಪೂಜಾ ಸಾಮಗ್ರಿಗಳು, ಸಿಸಿ ಕ್ಯಾಮರಾ, ಸ್ಟೀಲ್ ಪಾತ್ರೆ ವಸ್ತುಗಳು, ಚಪ್ಪಲಿ, ಯೂನಿಟ್ ಟ್ರಸ್ಟ್ ಮಳಿಗೆ, 1 ಗ್ರಾಂ ಗೋಲ್ಡ್ ಮಳಿಗೆ, ಗ್ರೋ ಬಗ್ಸ್, ಕಲ್ಲಿನ ಮೂರ್ತಿಗಳು, ಸಿಂಚು ಮಾರ್ಕೆಟಿಂಗ್ ಮಳಿಗೆಗಳಲ್ಲದೆ ಗ್ರಾಹಕರ ದಾಹ, ಹಸಿವು ನೀಗಿಸಬಲ್ಲ ಐಸ್ ಕ್ರೀಮ್, ಚರುಮುರಿ ಮಳಿಗೆ, ಬೆಣ್ಣೆ ದೋಸೆ, ರುಮಾಲ್ ರೋಟಿ, ಕಬ್ಬಿನ ಹಾಲು ಮಳಿಗೆಗಳು, ಪಶುಪಾಲನೆ/ಪಶು ವೈದ್ಯಕೀಯ ಸೇವಾ ಮಳಿಗೆ, ಎಸ್‌ಆರ್‌ಕೆ ಲ್ಯಾಡರ್, ರೇಷ್ಮೆ ಕೃಷಿ ಮಳಿಗೆ, ಬ್ರಹ್ಮಕುಮಾರಿ  ವಿದ್ಯಾಲಯ ಮಾಹಿತಿ ಕೇಂದ್ರ, ಸನಾತನ ಧಾರ್ಮಿಕ ಪ್ರಕಟಣೆಗಳು, ತೋಟಗಾರಿಕೆ ಇಲಾಖೆ, ಬ್ರೈಟ್ ಇಂಡಿಯಾ ಮಳಿಗೆ, ನಿರಂತರ ಪತ್ರಿಕೆ, ಕರ್ನಾಟಕ ಬ್ಯಾಂಕ್, ಮುಳಿಯ ಜ್ಯೂವೆಲ್ಲರ್ಸ್, ಸೈಕಲ್ ಬ್ರಾಂಡ್ ಅಗರಬತ್ತಿ, ಕಂಪ್ಯೂಟರ್ ಸೊಲ್ಯೂಷನ್, ಬೊಂಬೆ ಮತ್ತು ಮಕ್ಕಳ ಆಟದ ಸಾಮಗ್ರಿಗಳು ಮುಂತಾದ ವ್ಯಾಪಾರ ಮಳಿಗೆಗಳು ಗ್ರಾಹಕರ ಮನಸೂರೆಗೊಂಡು ಆಕರ್ಷಿಸಲ್ಪಡುತ್ತಿವೆ. 

ಮೊದಲ ದಿನವೇ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕಿ ಜನಜಾತ್ರೆಯ ಅನುಭವವಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕ್ಷೇತ್ರದ ಮಹಾದ್ವಾರ, ರಥ ಬೀದಿ ಹಾಗೂ ಇತರ ರಸ್ತೆಯ ಬದಿಗಳಲ್ಲೂ ಬಳೆ, ಮಣಿಸರಕು ವ್ಯಾಪಾರ, ಬಟ್ಟೆ, ರೆಡಿಮೇಡ್ ಡ್ರೆಸ್, ಕಂಬಳಿ ಹೊದಿಕೆಗಳ ಭರ್ಜರಿ ವ್ಯಾಪಾರ ಮಳಿಗೆಗಳು ತೆರೆದುಕೊಂಡಿವೆ. ಎಲ್ಲಿ ನೋಡಿದರಲ್ಲಿ ವರ್ಣ ವಿದ್ದ್ಯುದ್ದೀಪಾಲಂಕಾರಗಳು ಕಣ್ಮನಸೂರೆಗೊಳ್ಳುತ್ತವೆ. ಜಿಲ್ಲೆಯಾದ್ಯಂತದಿಂದ ಭಕ್ತರು ಹಾಗೂ ಗ್ರಾಹಕರು  ಲಕ್ಷದೀಪೋತ್ಸವದಲ್ಲಿ ಭಾಗವಹಿಸಿ ವಸ್ತು ಪ್ರದರ್ಶನದಲ್ಲಿ ತಮ್ಮ ಅಗತ್ಯ ಬೇಡಿಕೆಗಳ ಖರೀದಿಯಲ್ಲಿ ನಿರತರಾಗಿದ್ದಾರೆ.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article