
ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಸೇವಾ ಪ್ರದರ್ಶನಾರಂಭ
Monday, November 4, 2024
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಸೇವೆಯಾಟವು ನ.3 ರಂದು ಸಂಜೆ ಶ್ರೀ ಮಂಜುನಾಥ ಸ್ವಾಮಿ ಹಾಗು ಛತ್ರ ಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಹಾಗೂ ಮೇಳದ ಯಜಮಾನ ಹಷೇಂದ್ರ ಕುಮಾರ್ ಅವರ ಶುಭಾಶೀರ್ವಾದಗಳೊಂದಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಅವರು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಶುಭಾರಂಭಗೊಂಡಿತು.
ಮೇಳದ ಹಿಮ್ಮೇಳ, ಮುಮ್ಮೇಳ ಕಲಾವಿದರು, ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ ತಿರುಗಾಟದ ಪ್ರಥಮ ಸೇವೆಯಾಟವಾಗಿ ಮೇಳದ ಯಕ್ಷಗಾನ ಕಲಾವಿದರಿಂದ ‘ಪಾಂಡವಾಶ್ವಮೇಧ’ ಪೌರಾಣಿಕ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.
ನ.20 ರವರೆಗೆ ಪ್ರತಿ ರಾತ್ರಿ 7 ರಿಂದ 12 ರವರೆಗೆ ಹರಕೆಯ ಸೇವಾರ್ಥಿಗಳಿಂದ ಸೇವಾ ಬಯಲಾಟ ಪ್ರದರ್ಶನ ನಡೆಯಲಿದ್ದು, ನ.21 ರಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಮೇಳದ ಶ್ರೀ ಮಹಾಗಣಪತಿ ದೇವರ ದಿಗ್ವಿಜಯ ಯಾತ್ರೆಯೊಂದಿಗೆ ತಿರುಗಾಟದ ಮುಂದಿನ ಕ್ಯಾಂಪಿಗೆ ತೆರಳಲಿದೆ.