
ತೊಕ್ಕೊಟ್ಟು-ಮುಡಿಪು ರಸ್ತೆಗೆ 30 ಕೋಟಿ, ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿಗೆ 60 ಲಕ್ಷ ಅನುದಾನ
ಉಳ್ಳಾಲ: ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂಪಾಯಿ, ಮಂಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸರಕಾರದಿಂದ 60 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆಯೆಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.
ಉಳ್ಳಾಲ ನಗರಸಭಾ ವ್ಯಾಪ್ತಿಯ ಕರೆಬೈಲ್ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಂಕ್ರಿಟ್ ರಸ್ತೆ ಮತ್ತು ತಡೆಗೋಡೆ ಕಾಮಗಾರಿಗೆ ಗುರುವಾರದಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕೆರೆಬೈಲ್ ಪ್ರದೇಶಕ್ಕೆ ರಸ್ತೆ ಸಂಪರ್ಕವೇ ಇರಲಿಲ್ಲ.ರಸ್ತೆ ನಿರ್ಮಾಣಕ್ಕೆ ಸುಮಾರು 30 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೆ ಕೆಲಸ ಪ್ರಾರಂಭಿಸಲಾಗುತ್ತದೆ.ಕಳೆದ ಒಂದೂವರೆ ವರುಷದ ಹಿಂದೆ ತಡೆಗೋಡೆ ಬಿದ್ದು ಪ್ರದೇಶದ ಕೆಲ ಮನೆಗಳಿಗೆ ಅಪಾರ ಹಾನಿಯಾಗಿದೆ.ಇಲ್ಲಿಯ ತನಕ ಜಿಲ್ಲೆ ಅಥವಾ ಸರಕಾರದಿಂದ ತಡೆಗೋಡೆ ನಿರ್ಮಿಸಲು ಅನುದಾನ ಸಿಕ್ಕಿಲ್ಲ.ತನ್ನ ಶಾಸಕ ನಿಧಿಯಿಂದ ಸಾಧ್ಯವಾದಷ್ಟು ಅನುದಾನವನ್ನು ವ್ಯಯಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಗೂ ಚಾಲನೆ ಕೊಟ್ಟಿದ್ದೇವೆ. ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಸುಮಾರು 60 ಲಕ್ಷ ರೂಪಾಯಿ, ತೊಕ್ಕೊಟ್ಟು ಜಂಕ್ಷನ್ ನಿಂದ ಮುಡಿಪು ರಸ್ತೆ ಸುಸಜ್ಜಿತಗೊಳಿಸಲು 30 ಕೋಟಿ ರೂಪಾಯಿ ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ.ಚೆಂಬುಗುಡ್ಡೆಯಿಂದ ಪಂಡಿತ್ ಹೌಸ್ ನ ವರೆಗಿನ ನೇರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದರು.
ಉಳ್ಳಾಲ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆಯು ಮಂಜೂರಾಗಿ ಟೆಂಡರ್ ಕರೆಯಲಾಗಿದೆ. ಪಜೀರಿನಲ್ಲಿ ಅಗ್ನಿಶಾಮಕ ದಳದ ಠಾಣೆಯು ಶೀಘ್ರದಲ್ಲೇ ಆರಂಭಗೊಳ್ಳಲಿದೆ.ಉಳ್ಳಾಲ ತಾಲೂಕಿನ ಜನರು ಇಲ್ಲೇ ವಾಹನ ಚಾಲನಾ ಪರವಾನಿಗೆ ಪಡೆಯುವ ಉದ್ದೇಶದಿಂದ ಘನ ಮತ್ತು ಲಘು ವಾಹನಗಳ ಚಾಲನಾ ಪರವಾನಿಗೆ ನೀಡುವ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟ್ರ್ಯಾಕ್ ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು
ಕುಡಿಯುವ ನೀರು:
ಕುಡಿಯುವ ನೀರಿಗೆ ಸಂಬಂಧಿಸಿದಂತೆ 200 ಕೋಟಿಗೂ ಅಧಿಕ ಅನುದಾನದಿಂದ ಒಂದು ಹಂತದ ಕಾಮಗಾರಿ ಪ್ರಾರಂಭವಾಗಿದೆ.ಅದಕ್ಕೆ ಬೇಕಾಗುವ ಸಣ್ಣ ಸಣ್ಣ ಟ್ಯಾಂಕ್ ಗಳನ್ನು ಪ್ರತಿ ಗ್ರಾಮದಲ್ಲಿ ನಿರ್ಮಿಸಲಾಗಿದೆ.ಎರಡನೇ ಹಂತದ ಕಾಮಗಾರಿಯಾಗಿ ನಗರ,ಗ್ರಾಮ ಮಟ್ಟದಲ್ಲಿ ಮನೆ ಮನೆಗಳಿಗೆ ಮೀಟರ್ ಅಳವಡಿಸಿ ಪೈಪ್ ಲೈನ್ಹಾಕಲು,ಟ್ಯಾಂಕ್ ಕಟ್ಟಲು 300 ಕೋಟಿ ಬಿಡುಗಡೆಯಾಗಿದ್ದು, ಅತೀ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. .ನಗರೋತ್ಥಾನ ಯೋಜನೆಯಡಿ ಹೆಚ್ಚುವರಿ 25 ಕೋಟಿ ರೂಪಾಯಿ ಬರೀ ಉಳ್ಳಾಲ ನಗರಕ್ಕೆ ಬಿಡುಗಡೆಯಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದೆಂದು ಖಾದರ್ ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ,ಉಳ್ಳಾಲ ನಗರಸಭಾ ಅಧ್ಯಕ್ಷೆ ಶಶಿಕಲಾ,ಸ್ಥಳೀಯ ನಗರ ಸದಸ್ಯರಾದ ರಾಜೇಶ್ ಯು.ಬಿ ,ನಗರಸಭೆ ಮಾಜಿ ಸದಸ್ಯರಾದ ಉಸ್ಮಾನ್ ಕಲ್ಲಾಪು,ಮಹಮ್ಮದ್ ಮುಸ್ತಾಫ,ದಿನೇಶ್ ರೈ, ರಝಿಯಾ ಇಬ್ರಾಹಿಂ ಸೋಮೇಶ್ವರ ಪುರಸಭಾ ಸದಸ್ಯ ಪುರುಷೋತ್ತಮ ಶೆಟ್ಟಿ,ಕೆರೆಬೈಲ್ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ಪ್ರವೀಣ್ ,ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಲಾರೆನ್ಸ್ ಪಿಂಟೊ,ಮನ್ಸೂರ್ ಮಂಚಿಲ ಉಪಸ್ಥಿತರಿದ್ದರು.