
ಅನಧಿಕೃತ ಅಂಗಡಿಗಳ ತೆರವು
ಉಳ್ಳಾಲ: ದೇರಳಕಟ್ಟೆಯ ಬೇರೀಸ್ ವಾಣಿಜ್ಯ ಕಟ್ಟಡದಿಂದ ಕುತ್ತಾರು ಜಂಕ್ಷನ್ ವರೆಗಿನ ಲೋಕೋಪಯೋಗಿ ರಸ್ತೆಯನ್ನು ಅತಿಕ್ರಮಿಸಿದ್ದ ಅಂಗಡಿ, ಮಳಿಗೆಗಳನ್ನು ಲೋಕೋಪಯೋಗಿ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಶುಕ್ರವಾರದಂದು ಜೆಸಿಬಿ ಬಳಸಿ ಕೆಡವಿ ಹಾಕಿದ ಘಟನೆ ನಡೆದಿದೆ.
ನೋಟೀಸು ನೀಡದೆ ದಿಢೀರ್ ಕಾರ್ಯಾಚರಣೆ ನಡೆಸಿದ ಲೋಕೋಪಯೋಗಿ ಇಲಾಖಾಧಿಕಾರಿಗಳನ್ನು ವ್ಯಾಪಾರಿಗಳು ತರಾಟೆಗೈದಿದ್ದು, ಲೋಕೋಪಯೋಗಿ ರಸ್ತೆ ಅತಿಕ್ರಮಿಸಿರುವ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಬೋರ್ಡ್‌ಗಳನ್ನು ಕೆಡವಲು ನಿಮಗೆ ತಾಕತ್ತಿಲ್ಲವೇ ಎಂದು ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ.
ಪೊಲೀಸರ ರಕ್ಷಣೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಆರ್.ಬಿ, ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ರಸ್ತೆ ಅತಿಕ್ರಮಿತ ಅಂಗಡಿ,ಮಳಿಗೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.ದೇರಳಕಟ್ಟೆಯಿಂದ ಕುತ್ತಾರು, ಪಂಡಿತ್ ಹೌಸ್ ತನಕದ ರಸ್ತೆ ಇಕ್ಕೆಲಗಳನ್ನ ಅತಿಕ್ರಮಿಸಿದ ಅಂಗಡಿ, ಮಳಿಗೆಗಳನ್ನ ಜೆಸಿಬಿ ಯಂತ್ರದಿಂದ ಕೆಡವಲಾಗಿದೆ. ಅಂಗಡಿಯ, ಮಳಿಗೆಗಳ ಮುಂದೆ ರಸ್ತೆ ಅತಿಕ್ರಮಿಸಿ ಅಳವಡಿಸಲಾಗಿದ್ದ ಶೀಟ್ ಛಾವಣಿ, ಆವರಣ ಗೋಡೆ, ಇಂಟರ್ ಲಾಕ್‌ಗಳನ್ನು ಕೆಡವಲಾಗಿದೆ.
ಅಧಿಕಾರಿಗಳು ಅಂಗಡಿಗಳ ಮಾಲೀಕರಿಗೆ ನೋಟೀಸು ನೀಡದೆ ದಿಢೀರ್ ಕಾರ್ಯಾಚರಣೆ ನಡೆಸಿದ್ದು ಅಂಗಡಿಗಳಲ್ಲಿ ಬಾಡಿಗೆದಾರರಾಗಿ ವ್ಯಾಪಾರ ನಡೆಸುತ್ತಿರುವ ನಮ್ಮಂತಹ ಬಡ ವ್ಯಾಪಾರಿಗಳು ನಷ್ಟ, ಸಮಸ್ಯೆ ಅನುಭವಿಸುವಂತಾಗಿದೆ ಎಂದು ವ್ಯಾಪರಸ್ಥರು ದೂರಿದ್ದಾರೆ.