
ವಿಶ್ವ ಸ್ವಯಂ ಸೇವಕರ ದಿನಾಚರಣೆ
Friday, December 6, 2024
ಉಡುಪಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಉಡುಪಿ ಮಿಡ್ಟೌನ್ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಡಾ. ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಗುರುವಾರ ವಿಶ್ವ ಸ್ವಯಂ ಸೇವಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರೆಡ್ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ನಿಜವಾದ ಸ್ವಯಂಸೇವಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾನವೀಯ ದೃಷ್ಟಿಯಿಂದ ಸೇವೆ ಮಾಡುತ್ತಾರೆ. ಅದರಿಂದ ಅವರ ವ್ಯಕ್ತಿತ್ವ ರೂಪುಗೊಳ್ಳುವುದಲ್ಲದೆ ಆತ್ಮತೃಪ್ತಿ ದೊರೆಯುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಸ್ವಯಂ ಸೇವೆ ಒಂದು ಸಾಮಾಜಿಕ ಜವಾಬ್ದಾರಿ ಎಂದ ಅವರು, ಸ್ವಯಂಸೇವಕರ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ಪ್ರಸಾದ್ ಕೆ. ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ವಲಯಾಧ್ಯಕ್ಷ ಅನಂತ ಶೆಟ್ಟಿ, ರೆಡ್ಕ್ರಾಸ್ ಖಚಾಂಚಿ ರಮಾದೇವಿ, ಲಯನ್ಸ್ ಖಚಾಂಚಿ ರೇಖಾ ಎ. ಶೆಟ್ಟಿ ಮೊದಲಾದವರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ. ನಿಕೇತನ ಸ್ವಾಗತಿಸಿ, ಎನ್.ಎಸ್.ಎಸ್. ಯೋಜನಾಧಿಕಾರಿ ವಿದ್ಯಾ ಡಿ. ನಿರೂಪಿಸಿ, ರೆಡ್ಕ್ರಾಸ್ ಸಂಯೋಜಕಿ ಡಾ. ದಿವ್ಯ ಎಂ.ಎಸ್. ವಂದಿಸಿದರು.