
ಡಿ.7 ರಂದು ಕಲ್ಲಡ್ಕದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಆರ್ಎಸ್ಎಸ್ ಸರಸಂಘ ಚಾಲಕರಾದ ಮೋಹನ್ ಜೀ ಭಾಗವತ್ ಭೇಟಿ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವ-24 ಹನುಮಾನ್ ನಗರ ಮೈದಾನದಲ್ಲಿ ಡಿ.7 ರಂದು ಸಂಜೆ 6.30 ರಿಂದ ಆರಂಭಗೊಳ್ಳಲಿದ್ದು, ರಾ.ಸ್ವ.ಸೇ. ಸಂಘದ ಸರಸಂಘ ಚಾಲಕರಾದ ಮಾನನೀಯ ಮೋಹನ್ ಜೀ ಭಾಗವತ್ ಅವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ತಿಳಿಸಿದ್ದಾರೆ.
ಸೋಮವಾರ ಸಂಜೆ ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ರಾ.ಸ್ವ.ಸೇ.ಸಂಘಕ್ಕೆ 100 ವರ್ಷ ಪಾದಾರ್ಪಣೆ ಮಾಡುವ ಸುಸಂದರ್ಭದಲ್ಲಿ ಸರಸಂಘಚಾಲಕರಾದ ಮೋಹನ್ ಜೀ ಭಾಗವತ್ ಅವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡುತ್ತಿರುವುದು ನಮಗೆ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು.
ನಿಗದಿತ ಸಮಯಕ್ಕೆ ವಿದ್ಯಾಕೇಂದ್ರಕ್ಕೆ ಅಗಮಿಸುವ ಮೋಹನ್ ಜೀ ಭಾಗವತ್ ಅವರು ಶಿಶುಮಂದಿರ, ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಚಟುವಟಿಕೆಯನ್ನು ವೀಕ್ಷಿಸುವರು,ಬಳಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡುವರು, ಕ್ರೀಡೋತ್ಸವ ಪೂರ್ತಿ ಇರಲಿದ್ದಾರೆ ಎಂದು ವಿವರಿಸಿದ ಡಾ. ಭಟ್ ಅವರು ರಾ.ಸ್ವ.ಸೇ.ಸಂಘದ ಸರಸಂಘಚಾಲಕ ಮೋಹನ್ ಜೀ ಭಾಗವತ್ ಅವರು ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯೊಂದಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿ ಇಂತಹ ಕ್ರೀಡೋತ್ಸವವನ್ನು ವೀಕ್ಷಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂಸ್ಥೆ ಮತ್ತು ಮಕ್ಕಳ ಬೆಳವಣಿಗೆಯ ದೃಷ್ಠಿಯಲ್ಲಿ ನೀಡುವಂತ ಮಾರ್ಗದರ್ಶನವನ್ನು ನಮ್ಮ ಸಂಸ್ಥೆ ಕಾರ್ಯರೂಪಕ್ಕೆ ತರುವ ದಿಕ್ಕಿನಲ್ಲಿ ಸಾಗಲಿದೆ ಎಂದರು.
ಸರಸಂಘಚಾಲಕ ಮೋಹನ್ ಜೀ ಭಾಗವತ್ ಅವರ ಅಗಮನದ ಹಿನ್ನಲೆಯಲ್ಲಿ ಸಂಸ್ಥೆಯ ವತಿಯಿಂದ ಸಕಲ ಸಿದ್ದತೆಯನ್ನು ಮಾಡಲಾಗಿದ್ದು, ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಹಿನ್ನಲೆಯಲ್ಲಿ ಗಣ್ಯರಿಗೆ ಅಸನ ಸಹಿತ ಕೆಲ ವಿಚಾರದಲ್ಲಿ ಕೊನೆಗಳಿಗೆಯಲ್ಲಿ ಸಣ್ಣಪುಟ್ಟ ಬದಲಾವಣೆಯಾಗುವ ಸಾಧ್ಯತೆ ಇದೆ. ಮಕ್ಕಳ ಪೋಷಕರು, ಪ್ರೇಕ್ಷಕರಿಗೆ ಕ್ರೀಡೋತ್ಸವ ವೀಕ್ಷಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಅದೇ ರೀತಿ ಮುಂಬೈ, ಬೆಳಗಾವಿ, ಬೆಂಗಳೂರಿನ ಉದ್ಯಮಿಗಳು, ರಾಜಕೀಯ ನಾಯಕರು,ಶಾಸಕರುಗಳು ಸಹಿತ ಹಲವಾರು ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎಂದರು.
3338 ವಿದ್ಯಾರ್ಥಿಗಳು ಭಾಗಿ:
ಸಂಸ್ಥೆಯಲ್ಲಿರುವ ತಲಾ 20 ಮಂದಿ ಬುದ್ದಿಮಾಂದ್ಯರು,ವಿಕಲಚೇತನರು ಸೇರಿ ಶಿಶುಂಮಂದಿರದ ಮಕ್ಕಳಿಂದ ಹಿಡಿದು ಪದವಿ ಕಾಲೇಜಿನವರೆಗಿನ 3338 ವಿದ್ಯಾರ್ಥಿಗಳು ಈ ಕ್ರೀಡೋತ್ಸವದ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಲಿದ್ದಾರೆ. ಶಾಲೆಯ ಶಿಕ್ಷಕ, ಶಿಕ್ಷಕಿಯರೇ ತರಬೇತಿ ನೀಡುತ್ತಿರುವುದು ವಿಶೇಷತೆಯಾಗಿದೆ ಎಂದರು.
ಶಿಶು ನೃತ್ಯದಿಂದ ಹಿಡಿದು ಪ್ರೌಢಸಾಮೂಹಿಕ ದವರೆಗೆ ಸುಮಾರು 19 ಪ್ರದರ್ಶನಗಳು ಸುಮಾರು ಮೂರು ತಾಸುಗಳ ಕಾಲ ನಡೆಯಲಿದೆ.ಬಳಿಕ ಅತಿಥಿಗಳಿಂದ ಅನಿಸಿಕೆ,ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.