
ಅಕ್ರಮ ಗೋಮಾಂಸ ಸಾಗಾಟ ಪತ್ತೆ: ಸ್ಕೂಟರ್ ಸವಾರನ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ತಾಲೂಕಿನ ಸಜೀಪಮುನ್ನೂರಿನ ಗಾಂಧಿನಗರ ಕ್ರಾಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವೀಚಕ್ರ ವಾಹನದಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆಯಾಗಿದ್ದು, ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜೀಪಮುನ್ನೂರು ದಾಸರಗುಡ್ಡೆ ನಿವಾಸಿ ಸ್ಕೂಟರ್ ಸವಾರೆ ಅನುರಾಧ ಕೆ. ಎಂಬವರು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಗಾಂಧಿನಗರ ಕ್ರಾಸ್ ಬಳಿ ಸಜೀಪ ಕಡೆಯಿಂದ ಸ್ಕೂಟರನ್ನು ಅತಿ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅನುರಾಧ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ.
ಎರಡೂ ಸ್ಕೂಟರ್ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿದ್ದು,ಈ ಸಂದರ್ಭ ಅಪಘಾತಗೊಳಿಸಿದ ಸ್ಕೂಟರಿನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿರಿಸಲಾಗಿದ್ದ ಮಾಂಸದ ಕಟ್ಟುಗಳು ಕೂಡ ರಸ್ತೆಗೆ ಬಿದ್ದಿದೆ. ಎಲ್ಲಿಯೋ ದನವನ್ನು ಹತ್ಯೆಗೈದು ಮಾಂಸವನ್ನು ಮಾರಾಟ ಮಾಡುವುದಕ್ಕಾಗಿ ಸಜೀಪದಿಂದ ಮೆಲ್ಕಾರ್ ಕಡೆಗೆ ಸಾಗಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.