
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ವೈಭವದಿಂದ ಜರುಗಿದ ಗೌರಿಮಾರುಕಟ್ಟೆ ಉತ್ಸವ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಐದನೇ ದಿನ ಗೌರಿ ಮಾರುಕಟ್ಟೆ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಲಕ್ಷದೀಪೋತ್ಸವದ ಕೊನೇಯ ದಿನ ಗೌರಿ ಮಾರುಕಟ್ಟೆ ಉತ್ಸವದಲ್ಲಿ ದೇವಳದ ಒಳಾಂಗಣದಲ್ಲಿ ಶ್ರೀ ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸುವುದರೊಂದಿಗೆ ಉತ್ಸವ ಆರಂಭಗೊಂಡಿತು. ದೇವಸ್ಥಾನದ ಒಳಗಡೆ ೧೬ ಸುತ್ತು ಪ್ರದಕ್ಷಿಣೆಯ ನಂತರ ಹೊರಾಂಗಣಕ್ಕೆ ಉತ್ಸವಮೂರ್ತಿಯನ್ನು ಕರೆತರಲಾಯಿತು.
ಉತ್ಸವಮೂರ್ತಿಯನ್ನು ಸರ್ವಾಲಂಕೃತವಾದ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ವಾದ್ಯ, ಗಾಯನ, ಶಂಖ, ಜಾಗಟೆ ಸೇರಿದಂತೆ ಸರ್ವವಾದ್ಯ ಸೇವೆಗಳನ್ನು ಶ್ರೀ ಮಂಜುನಾಥನಿಗೆ ಸಲ್ಲಿಸಲಾಯಿತು.
ಬಳಿಕ ಬೆಳ್ಳಿರಥವನ್ನು ಓಲಗ, ಚೆಂಡೆ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ತಮಟೆ, ವಾದ್ಯಗಳ ಸೇವೆ ಸಲ್ಲಿಸುತ್ತಾ, ವಿವಿಧ ವರ್ಣದ ಛತ್ರಿ ಛಾಮರ ದ್ವಜಗಳೊಂದಿಗೆ ರಥಬೀದಿಯಲ್ಲಿ ಸಾವಿರಾರು ಭಕ್ತರ ಉದ್ಘೋಷದೊಂದಿಗೆ ಗೌರಿಮಾರು ಕಟ್ಟೆಗೆ ರಥವನ್ನು ಎಳೆಯಲಾಯಿತು. ಗೌರಿಮಾರು ಕಟ್ಟೆಯ ಮೇಲೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ಚತುರ್ವೇದ, ಸಂಗೀತ, ಮೌರ್ಯವಾದ್ಯ, ಸರ್ವವಾದ್ಯಗಳಿಂದ ಸ್ವಾಮಿಗೆ ಅಷ್ಟವಿಧ ಸೇವೆ ನೆರವೇರಿಸಲಾಯಿತು.
ಗೌರಿ ಮಾರುಕಟ್ಟೆಯಲ್ಲಿ ದೇವರ ಪೂಜೆಯ ದೇವರನ್ನು ದೇವಸ್ಥಾನದ ಮುಂಭಾಗಕ್ಕೆ ಕರೆತರಲಾಯಿತು. ದೇವಸ್ಥಾನವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವರ ಮೂರ್ತಿಯನ್ನು ದೇವಳದ ಒಳಗೆ ಕರೆದೊಯ್ಯುವುದರ ಮೂಲಕ ಗೌರಿಮಾರು ಕಟ್ಟೆ ಉತ್ಸವವು ಸಂಪೂರ್ಣಗೊಂಡಿತು.