
ಹೋರಾಟಗಳೇ ಸಂವಿಧಾನದ ಆಶಯಗಳಿಗೆ ಆಸರೆ: ಕೆ. ಯಾದವ ಶೆಟ್ಟಿ
ಗುರುಪುರ: ಗುರುಪುರ ಕೖಕಂಬದಲ್ಲಿ ಇಂದು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಗುರುಪುರ ವಲಯ ಸಮಿತಿ ನೇತ್ರತ್ವದಲ್ಲಿ ಸಂವಿಧಾನಿಕ ಹಕ್ಕುಗಳನ್ನು ದಮನಿಸುತ್ತಿರುವ ಪೊಲೀಸ್ ಕಮಿಷನರ್ ಆಗ್ರವಾಲರ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನವು ನಡೆಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಯಾದವ ಶೆಟ್ಟಿ ಮಾತನಾಡಿ, ದೇಶದ ಇತಿಹಾಸದಲ್ಲಿ ಹೋರಾಟಕ್ಕೆ ಒಂದು ಗೌರವದ ಸ್ಥಾನವಿದೆ. ಹೋರಾಟ, ಧರಣೆಗಳು ಈ ಭಾರತ ದೇಶವನ್ನು ರೂಪಿಸಿದೆ ಮತ್ತು ಈ ಭಾರತವನ್ನು ಪ್ರಜಾ ಹಿತದ ದೇಶವನ್ನಾಗಿಸಿದೆ. ಅಂತಹ ಹೋರಾಟಗಳನ್ನು ದಮನಿಸ ಹೊರಟ ಮಂಗಳೂರಿನ ಪೊಲೀಸ್ ಕಮಿಷನ್ ಈ ಜಿಲ್ಲೆಯ ಹೋರಾಟದ ಇತಿಹಾಸವನ್ನು ಒಮ್ಮೆ ತಿಳಿದುಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನಚಳುವಳಿಯನ್ನು ಮಟ್ಟಹಾಕಲು ಯತ್ನಿಸಿದ ಅದೆಷ್ಟೋ ಪೊಲೀಸ್ ಅಧಿಕಾರಿಗಳು ಹೇಳ ಹೆಸರಿಲ್ಲದೆ ಹೋಗಿದ್ದರೆ ಪೊಲೀಸ್ ದರ್ಪಗಳಿಗೆ ಹೋರಾಟಗಳೆಂದು ನಿಲ್ಲುವುದಿಲ್ಲ. ಹೋರಾಟವೇ ಸಂವಿಧಾನದ ಆಶಯಗಳಿಗೆ ಆಸರೆ ಎಂದರು.
ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮಾತನಾಡುತ್ತ ಮಂಗಳೂರಿನ ಮಟ್ಕ, ಜೂಜು, ಮಸಾಜ್ ಪಾರ್ಲರ್, ಹೊಯ್ಗೆ ದಂದೆಗಳೊಂದಿಗೆ ಹಪ್ತಾ ಸಂಗ್ರಹಿಸಿ ಅವರ ಕಾನೂನು ಬಾಹಿರತೆಯನ್ನು ಪ್ರಶ್ನಿಸದ ಆಗ್ರವಾಲರಿಗೆ ಜನತೆಯ ನಿತ್ಯದ ಬದುಕಿನ ಸಮಸ್ಯೆಗಳು ಕಾನೂನು ಬಾಹಿರ ಚಟುವಟಿಕೆಗಳಂತೆ ಗೋಚರವಾಗುತ್ತದೆ. ಇಂತಹ ಭ್ರಷ್ಟಾ ಅಧಿಕಾರಿಯ ಅವಶ್ಯಕತೆ ಈ ಜಿಲ್ಲೆಗೆ ಇಲ್ಲ ಎಂದರು.
ಪ್ರತಿಭಟನೆಯಲ್ಲಿ ಸಿಪಿಐಎಂನ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರ್, ವಸಂತಿ ಕುಪ್ಪೆಪದವು, ವಲಯ ಸಮಿತಿ ಸದಸ್ಯರಾದ ಅಶೋಕ್ ಬಂಗೇರ, ನೋಣಯ್ಯ ಗೌಡ, ಬಾಬು ಸಾಲ್ಯಾನ್, ವಾರಿಜ ಕುಪ್ಪೆಪದವು, ಗೋಪಾಲ ಮಳಲಿ ಮೊದಲಾದವರು ಉಪಸ್ಥಿತರಿದ್ದರು.