
ಕಮ್ಯುನಿಸ್ಟ್ ಶತಮಾನೋತ್ಸವ: ವಿವಿಧ ಕಾರ್ಯಕ್ರಮ
ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಡಿ 24ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ. 26ರಂದು ಬೆಳಗ್ಗೆ 11 ಗಂಟೆಗೆ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ತಿಳಿಸಿದರು.
ಡಿ. 25ರಂದು ಬೆಳಗ್ಗೆ 11ಕ್ಕೆ ಕೇರಳದ ನೀಲೇಶ್ವರ ಸಮೀಪದ ಕಯ್ಯೂರಿನ ಹುತಾತ್ಮ ರೈತ ಹೋರಾಟಗಾರರ ಸ್ಮಾರಕದಲ್ಲಿ ಸಂಭ್ರಮಾಚರಣೆಗೆ ಚಾಲನೆ ದೊರೆಯಲಿದೆ. ಮಧ್ಯಾಹ್ನ 3.30ಕ್ಕೆ ತೊಕ್ಕೊಟ್ಟು ಉಳ್ಳಾಲ ನಗರದಲ್ಲಿ ಸ್ವಯಂ ಸೇವಕರ ಪ್ರಚಾರ ಜಾಥ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಉಳ್ಳಾಲ ರಾಣಿ ಅಬ್ಬಕ್ಕ ವೃತ್ತ ಬಳಿಯ ಕಡಲ ಕಿನಾರೆಯಲ್ಲಿ ಸಾಂಸ್ಕೃತಿಕ ಸಂಜೆ, ಭಾರತೀಯ ಜಲಕಲಾ ಸಮಿತಿಯಿಂದ ಹೋರಾಟ ಗೀತೆಗಳು ಕವಿ, ಕಲಾವಿದ ಹುಸೇನ್ ಕಾಟಿಪಳ್ಳ ಮತ್ತು ಬಳಗಿಂದ ಜನಪದೀಯ ಸೌಹಾರ್ದ ಗೀತೆಗಳನ್ನು ಒಳಗೊಂಡ ಸಂಗೀತ ರಸಮಂಜರಿ ಪ್ರೀತಿದ ಪೂ ಕಲಾತಂಡದಿಂದ ಸಿಂಹ ಕುಣಿತ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಡಿ. 26ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಮಿನಿ ವಿಧಾನ ಸೌಧದಿಂದ ಮೆರವಣಿಗೆ ಬಳಿಕ ಬಹಿರಂಗ ಸಭೆ ಡಾನ್ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಶತಮಾನೋತ್ಸವದ ಸಂಭ್ರಮಾಚರಣೆಯ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ, ಡಾ. ಜಿ. ರಾಮಕೃಷ್ಣ , ಸಮಿತಿಯ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಮಂಡಳಿ ಮಾಜಿ ಸದಸ್ಯ ವಿ.ಕುಕ್ಯಾನ್, ಕರುಣಾಕರ್ ಉಪಸ್ಥಿತರಿದ್ದರು.