
ಮೂಲ್ಕಿ ಉಳಿಪ್ಪಾಡಿಯಲ್ಲಿ ಅಕ್ರಮ ಮರಳುಗಾರಿಕೆ: ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷನ ಗೂಂಡಾಗಿರಿ
ಮಂಗಳೂರು: ಮಂಗಳೂರು ತಾಲೂಕಿನ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಪ್ಪಾಡಿ ಕರಿಯತ್ತಲ ಗುಂಡಿ ಏತ ನೀರಾವರಿ ಪಂಪು ಬಳಿ ದಿನಂಪ್ರತಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ.
ಎಲ್ಲಾ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಐಕಳ ಪಂಚಾಯತ್ ಅಧ್ಯಕ್ಷ ದಿವಾಕರ್ ಚೌಟ ಎಂಬಾತನ ನೇತೃತ್ವದಲ್ಲಿ ಅಕ್ರಮ ಮರಳು ಸಾಗಾಟ ಪ್ರತಿನಿತ್ಯ ಹಗಲು ರಾತ್ರಿ ನಡೆಸಲಾಗುತ್ತಿದೆ. ಮೂಲ್ಕಿ ಪೊಲೀಸರು, ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಮೂಲ್ಕಿ ವಿಭಾಗದ ಕಂದಾಯ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸ್ಥಳೀಯ ತಹಶೀಲ್ದಾರ್ ಈತನ ದುಡ್ಡಿನ ಆಸೆಗೆ ಬಲಿ ಬಿದ್ದು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರು ಸ್ಥಳೀಯ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ. ಇದನ್ನು ಆಕ್ಷೇಪಿಸುವ ಸ್ಥಳೀಯರ ವಿರುದ್ಧ ಗೂಂಡಾಗಿರಿ ನಡೆಸಲಾಗುತ್ತಿದೆ. ರಾತ್ರಿ ಮರಳು ಸಾಗಾಟ ನಡೆಸುವ ಚಾಲಕರು ಮತ್ತು ಸಿಬ್ಬಂದಿಗಳು ಮದ್ಯಪಾನ ಮಾಡಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ಉದಾಹರಣೆಗಳಿವೆ.
ಅಕ್ರಮ ಮರಳು ಸಾಗಾಟ ನಡೆಸುವ ಬಹುತೇಕ ಲಾರಿಗಳ ಚಾಲಕರಿಗೆ ಲೈಸನ್ಸ್ ಇಲ್ಲ. ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಕೊನೆಗೊಂಡು ತಿಂಗಳುಗಳೆ ಕಳೆದಿವೆ. ಈ ಬಗ್ಗೆ ಆರ್‌ಟಿಓ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
ಪೊಲೀಸ್, ಕಂದಾಯ, ತಹಶೀಲ್ದಾರ್ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತಿಂಗಳ ಮಾಮೂಲಿ ನೀಡಿಯೇ ಮರಳುಸಾಗಾಟ ನಡೆಸುತ್ತಿದ್ದೇವೆ ಎಂದು ಅಕ್ರಮ ಮರಳು ಸಾಗಾಟ ದಾರರು ರಾಜಾರೋಷವಾಗಿ ಹೇಳುತ್ತಿದ್ದಾರೆ.
ಸ್ವತಹ ಪಂಚಾಯತ್ ಅಧ್ಯಕ್ಷ ದಿವಾಕರ್ ಚೌಟ ಮರಳು ಮಾಫಿಯಾದ ಪರ ಗುಂಡಾಗಿರಿ ನಡೆಸುತ್ತಿದ್ದಾನೆ. ಪೊಲೀಸರು, ಪತ್ರಕರ್ತರು, ರಾಜಕಾರಣಿಗಳು ನಾನು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಹೇಳಿ ಸ್ಥಳೀಯರನ್ನು ಬೆದರಿಸುತ್ತಿದ್ದಾನೆ. ಸ್ಥಳೀಯ ಚಾನೆಲ್ ಗಳಿಂದ ಹಿಡಿದು ರಾಜ್ಯಮಟ್ಟದ ಚಾನೆಲ್‌ಗಳ ತನಕ ಸಂಪರ್ಕವಿದೆ ಎಂದು ನೊಂದ ಗ್ರಾಮಸ್ಥರು ಉಳೆಪ್ಪಾಡಿ ಮಂಗಳೂರು ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿಗಳಿಗೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.