
ಡ್ರಗ್ಸ್ ಮಾಫಿಯಾದ ‘ಒಂದು ಹೆಜ್ಜೆ’: ಥೋಮಸ್ ಎಂ.ಎಂ.
ಮಂಗಳೂರು: ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್ ಅಡಿಯಲ್ಲಿ ಡ್ರಗ್ಸ್ ಮಾಫಿಯಾದ ಭೀಕರತೆ ಮತ್ತು ಅದರ ದುಷ್ಪರಿಣಾಮ ಬಿಂಬಿಸಲು ‘ಒಂದು ಹೆಜ್ಜೆ’ ಚಲನಚಿತ್ರ ನಿರ್ಮಿಸಲಾಗುವುದು ಎಂದು ಚಿತ್ರಕಥೆ, ಸಂಭಾಷಣೆ ಬರೆದಿರುವ ಥೋಮಸ್ ಎಂ.ಎಂ. ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಇದನ್ನು ಮಟ್ಟ ಹಾಕುವಲ್ಲಿ ಕಾರ್ಯೋನ್ಮುಖವಾಗಿದ್ದರೂ, ಡ್ರಗ್ಸ್ ಮಾಫಿಯಾ ಹತೋಟಿಗೆ ಬಂದಿಲ್ಲ. ಚಲನಚಿತ್ರದ ಮೂಲಕ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಾದಕ ದ್ರವ್ಯಗಳಿಂದ ಬೇಸತ್ತ ಅಧಿಕಾರಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಮಾಫಿಯಾ ವಿರುದ್ಧ ಹೋರಾಡಲು ಮರುಜನ್ಮದ ಶಕ್ತಿ ಪ್ರವೇಶವಾಗುತ್ತದೆ. ಈ ಶಕ್ತಿಯೇ ಚಲನಚಿತ್ರದ ಮುಖ್ಯ ಕಥೆಯಾಗಿದೆ ಎಂದರು.
ಒಂದು ಚಿತ್ರವನ್ನು ಕಂಡು 100 ಜನರು ಮನರಂಜನೆ ಪಡೆಯುವುದಕ್ಕಿಂತ 10 ಜನರು ಬದಲಾದರೆ ಅದು ದೊಡ್ಡ ಯಶಸ್ಸು. ಶಾಲಾ, ಕಾಲೇಜುಗಳಿಗೆ ಬಂದು ತಲುಪಿರುವ ಮಾದಕ ವಸ್ತುಗಳು ಭಯಾನಕ ದುಷ್ಪರಿಣಾಮವೇ ಸರಿ. ಒಂದು ಹೆಜ್ಜೆ ಚಿತ್ರದಲ್ಲಿ ಇದರ ಭೀಕರತೆಯನ್ನು ತೋರಿಸಲಾಗುತ್ತದೆ. ಚಿತ್ರಕ್ಕೆ ಅಂದಾಜು 1.10 ಕೋಟಿ ಮೊತ್ತ ಅಗತ್ಯವಿದ್ದು, ಚಿತ್ರೀಕರಣಕ್ಕೆ ಕ್ರೌಡ್ ಫಂಡಿಂಗ್ ನಿರೀಕ್ಷೆ ಮಾಡುತ್ತಿದ್ದೇವೆ. ದಾನಿಗಳು, ಕಲಾ ಪೋಷಕರು ನೆರವಾಗಬೇಕು. ಈ ಚಿತ್ರವನ್ನು ಆರ್ಥಿಕ ಲಾಭದ ದೃಷ್ಟಿಯಿಂದ ಮಾಡುತ್ತಿಲ್ಲ, ಬದಲಾಗಿ, ಕೆಟ್ಟ ಪಿಡುಗಿನ ವಿರುದ್ಧ ಸಮರ ಸಾರುವ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಮಲೆಯಾಳ ಭಾಷಿಕರಾಗಿರುವ ಕೇರಳ ಕಣ್ಣೂರಿನ ಥೋಮಸ್ ಅವರು 25 ವರ್ಷಗಳಿಂದ ವೇಣೂರಿನಲ್ಲಿ ನೆಲೆಸಿದ್ದಾರೆ. ಹಿಂದೆ ‘ಮಗಳು’ ಚಿತ್ರ ಮಾಡಿದ್ದ ಅವರು ಪ್ರಸ್ತುತ ‘ಒಂದು ಹೆಜ್ಜೆ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ ಎಂದು ಪದ್ಮನಾಭ ವೇಣೂರು ಹೇಳಿದರು.