ಬೀದಿ ಬದಿ ವ್ಯಾಪಾರಸ್ಥರ ವಲಯ ಉದ್ಘಾಟನೆ

ಬೀದಿ ಬದಿ ವ್ಯಾಪಾರಸ್ಥರ ವಲಯ ಉದ್ಘಾಟನೆ


ಮಂಗಳೂರು: ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕದಡಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ಪಾಲಿಕೆ ವ್ಯಾಪ್ತಿಯ ಕಂಟೋನ್ಮೆಂಟ್ ವಾರ್ಡ್-೪೬ರ ಇಂದಿರಾ ಕ್ಯಾಂಟೀನ್ ಬಳಿ ನಿರ್ಮಿಸಲಾದ ಬೀದಿ ಬದಿ ವ್ಯಾಪಾರಸ್ಥರ ವಲಯ ಉದ್ಘಾಟನೆಯನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಸೂರು ಕಲ್ಪಿಸುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಇನ್ನಷ್ಟು ಮಂದಿಗೆ ಗುರುತಿನ ಚೀಟಿ ನೀಡಿ ನಗರದ ಹಲವು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣ ಮಾಡಲಾಗುವುದು. ಈ ಮೂಲಕ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟಕ್ಕೆ ಸ್ಪಂದಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ, ದೀನದಯಾಳ್ ಉಪಾಧ್ಯಾಯ್ ಅವರ ಕಲ್ಪನೆಯಂತೆ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರ ವಲಯದಲ್ಲಿ ನಗರದ 93 ವ್ಯಾಪಾರಸ್ಥರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ನೀರಿನ ವ್ಯವಸ್ಥೆ, ಬೀದಿ ದೀಪ ಸಹಿತ ಮೂಲ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಭಾಗದಲ್ಲಿ ಪ್ರತ್ಯೇಕ ವಲಯ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಈಡೇರಿಸುವುದು ಸುಲಭ ಇರಲಿಲ್ಲ. ಒಂದೇ ಕಡೆ ವ್ಯಾಪಾರಕ್ಕೆ ವ್ಯಾಪಾರಿಗಳನ್ನು ಮನವೊಲಿಸಿ ಉತ್ತಮ ವ್ಯವಸ್ಥೆ ನೀಡಿದ್ದೇವೆ. ಹೊಸ ವಲಯವನ್ನು ವ್ಯಾಪಾರಸ್ಥರೂ ಒಪ್ಪಿಗೆ ಸೂಚಿಸಿದ್ದು, ಬೀದಿ ಬದಿ ವ್ಯಾಪಾರಸ್ಥರ ಪದಾಧಿಕಾರಿಗಳೂ ಸಹಕಾರ ನೀಡಿದ್ದಾರೆ. ಇಂದಿನಿಂದಲೇ ಇಲ್ಲಿ ವ್ಯಾಪಾರ ನಡೆಸಬಹುದು. ಯಾವುದೇ ವ್ಯಾಪಾರಸ್ಥರನ್ನು ಅತಂತ್ರ ಸ್ಥಿತಿಯಲ್ಲಿರಲು ಬಿಡುವುದಿಲ್ಲ ಎಂದು ವಿವರಿಸಿದರು.

ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಆಶ್ರಯ ನೀಡುವ ಯೋಜನೆ ಇದಾಗಿದೆ. ಮಾಜಿ ಮೇಯರ್‌ಗಳು, ಆಡಳಿತ-ವಿಪಕ್ಷ ಸದಸ್ಯರು, ಅಧಿಕಾರಿಗಳು, ಸಂಘದ ಸದಸ್ಯರ ಸಹಕಾರದಿಂದ ಈ ಯೋಜನೆ ಸಕಾರವಾಗಿದೆ. ಇನ್ನಷ್ಟು ಕಡೆ ವ್ಯಾಪಾರ ವಲಯ ನಿರ್ಮಾಣಗೊಳಿಸಲು ಪಾಲಿಕೆ ಮುಂದಾಗಬೇಕಿದೆ ಎಂದು ಹೇಳಿದರು.

ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅನು ಕೂಲಕರ ವಾತಾವರಣ ನಿರ್ಮಿಸಲಾಗಿದೆ ಎಂದು ಹೇಳಿದರು.

‘ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ನೀಡುವ ಉದ್ದೇಶ, ಗೌರವದ ಬದುಕು ನಡೆಸುವುದಕ್ಕೆ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣಗೊಂಡಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಬೀದಿ ಬದಿ ವ್ಯಾಪಾರ ಕಾನೂನು ಜಾರಿಗೆ ತಂದರು. ಈ ಮೂಲಕ ಹಲವು ರಾಜ್ಯದಲ್ಲಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಾಣಗೊಂಡಿತು. ಸ್ಟೇಟ್ಬ್ಯಾಂಕ್ ಜನನಿಬಿಡಿ ಪ್ರದೇಶವಾಗಿದ್ದು, ಖಂಡಿತವಾಗಿಯೂ ಉತ್ತಮ ವ್ಯಾಪಾರ ಸಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ವ್ಯಾಪಾರ ವಲಯ ನಿರ್ಮಾಣದ ಜತೆ ಮೂಲಭೂತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಜತೆ ಮಾತುಕತೆ ನಡೆಸುತ್ತೇನೆ’ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article