‘ಸಹಕಾರ ರತ್ನ’ ಹರೀಶ್ ಆಚಾರ್ಯಗೆ ಸನ್ಮಾನ

‘ಸಹಕಾರ ರತ್ನ’ ಹರೀಶ್ ಆಚಾರ್ಯಗೆ ಸನ್ಮಾನ


ಮಂಗಳೂರು: ರಾಜ್ಯ ಸರಕಾರದಿಂದ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರಿಗೆ ಅಭಿನಂದನಾ ಸಮಾರಂಭ ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಸಹಕಾರ ಬ್ಯಾಂಕ್ ಹಿತೈಷಿಗಳ ಬಳಗ ಮತ್ತು ಸಹಕಾರಿ ಮಿತ್ರರು ಆಶ್ರಯದಲ್ಲಿ ರಥಬೀದಿಯಲ್ಲಿರುವ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆಯಿತು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರಿನ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸಾಧಿಸುವ ಛಲ, ಧೈರ್ಯ, ಪರಿಶ್ರಮ ಇದ್ದರೆ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ಹರೀಶ್ ಆಚಾರ್ಯ ಅವರು ನಿದರ್ಶನ ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಾತನಾಡಿದರು.

ಉಪೇಂದ್ರ ಆಚಾರ್ಯ ಪೆರ್ಡೂರು, ವೆಂಕಟೇಶ್ ಎ.ಎಸ್., ದಯಾನಂದ ಅಡ್ಯಾರ್, ಭಾರತೀ ಜಿ. ಭಟ್, ಜೈರಾಜ್ ರೈ, ಅಶೋಕ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು. ಜಿತಿನ್ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹರೀಶ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.

ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಕೆಲಸ..:

ಅಭಿನಂದನೆ ಸ್ವೀಕರಿಸಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಮಾತನಾಡಿ, ನನ್ನ ಬೆಳವಣಿಗೆಗೆ ಕಿರಿಯರಿಂದ ಹಿರಿಯರವೆರೆಗಿನ ಹಲವರ ಕೊಡುಗೆ ಇದೆ. ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಮೆಡಿಕಲ್ ಹಬ್ ನಗರದ ಹೊರ ಭಾಗಕ್ಕೂ ಹರಡಿದೆ. ವೈದ್ಯಕೀಯ ಚಿಕಿತ್ಸೆಗೆ ದುಬಾರಿ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಸಹಕಾರಿ ಕ್ಷೇತ್ರದಿಂದ ಪರಿಹಾರ ಸಾಧ್ಯವಿದ್ದು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article