
ಮೂಡಬಿದಿರೆ ತಾಲೂಕಿನ ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ವಿಶೇಷ ಸಭೆ
ಮೂಡುಬಿದಿರೆ: ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ಮೂಡಬಿದ್ರೆ ತಾಲೂಕಿನ ವಿಶೇಷ ಸಭೆಯನ್ನು ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಇವರ ನೇತೃತ್ವದಲ್ಲಿ, ಸಮಾಜ ಮಂದಿರದ ಸರಸ್ವತಿ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಸಂಘಟನೆಯ ಉದ್ದೇಶದ ಬಗ್ಗೆ ಮತ್ತು ಬೈಲಾದ ಬಗ್ಗೆ ಮತ್ತು ಭಜನಾ ಸ್ಪರ್ಧೆಯ ಬಗ್ಗೆ ಚೌಕಟ್ಟು ಯಾಕೆ ಬೇಕು ಎನ್ನುವ ಬಗ್ಗೆ, ಭಜನಾ ತರಬೇತುದಾರರು, ತೀರ್ಪುಗಾರರು, ಭಜನಾ ಸಂಘಟಕರು ಎಲ್ಲರೂ ಒಂದೇ ಸೂರಿನಡಿಯಲ್ಲಿ ಸೇರಬೇಕು, ಭಜನಾ ಮಂಡಳಿಗಳಿಗೆ ಮತ್ತು ಭಜಕರಿಗೆ ಸರಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳು ಸಿಗಬೇಕಾದರೆ ಸರಕಾರದಿಂದ ನೋಂದಾಯಿಸಿದ ಭಜಕರ ಸಂಘಟನೆಯ ಅವಶ್ಯಕತೆ ಇದೆ ಎಂದು ಸಂಘಟನೆಯ ಮುಂದಿನ ಯೋಜನೆಯ ಕುರಿತು ಶ್ರೀನಿವಾಸ್ ಪೂಜಾರಿ ಎರ್ಲಪಾಡಿಯವರು ಮಾಹಿತಿ ನೀಡಿದರು.
ಮೂಡಬಿದಿರೆ ತಾಲೂಕು ಸಮಿತಿಯ ಅಧ್ಯಕ್ಷರನ್ನಾಗಿ ದಿನಕರ್ ಕುಲಾಲ್ ಅಂಬೂರಿ ಬೆಳುವಾಯಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸಮಿತಿಯ ಪದಗ್ರಹಣ ಕಾರ್ಯಕ್ರಮ ಮತ್ತು ಸಂಘಟನೆಯ ಅಧಿಕೃತ ಉದ್ಘಾಟನೆ ಮಾಡುವುದೆಂದು ತಿಳಿಸಲಾಯಿತು.
ಜಿಲ್ಲಾ ಪದಾಧಿಕಾರಿಗಳಾದ ಶೈಲೇಶ್ ಸಾಣೂರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತರಬೇತುದಾರರ ಒಗ್ಗಟ್ಟು ಕಾಣಿಸುತ್ತಿಲ್ಲ, ಎಲ್ಲರೂ ಒಗ್ಗಟ್ಟಾಗಿ ಸಂಘಟನೆಯನ್ನು ಕಟ್ಟುವಂತೆ ಕಟ್ಟಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ತಿಳಿಸಿದರು.
ಅಶೋಕ್ ನಾಯ್ಕ್ ಕಳಸಬೈಲು, ಸತೀಶ್ ಪೂಪಾಡಿಕಲ್ಲು, ಭಾಸ್ಕರ್ ಕೋಟೆ ಬಾಗಿಲು ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಕಡಾರಿ ಉಪಸ್ಥಿತರಿದ್ದರು.
ಮೂಡುಬಿದ್ರೆ ತಾಲೂಕಿನ ಭಜನಾ ತರಬೇತುದಾರರು, ತೀರ್ಪುಗಾರರು, ಭಜನಾ ಸಂಘಟಕರು ಹಾಗೂ ಭಜಕರು ಇದ್ದರು. ಮಂಗಳೂರು ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ಜೊತೆ ಕಾರ್ಯದರ್ಶಿ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.