
ಅರ್ಚಕರ ಮನೆಯಿಂದ ನಗ-ನಗದು ಕಳವು
Monday, December 23, 2024
ಸುಬ್ರಹ್ಮಣ್ಯ: ಅರ್ಚಕರ ಮನೆಯಿಂದ ಹಣ ಹಾಗೂ ಚಿನ್ನ ಕಳ್ಳತನ ಆಗಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಅವರು ಸುಬ್ರಹ್ಮಣ್ಯ ಮಠದ ವಾಸವಾಗಿದ್ದು, ಡಿ.22ರಂದು ಬೆಳಗಿನ ಜಾವ ಎಂದಿನಂತೆ ಅರ್ಚಕ ವೃತ್ತಿ ನಿರ್ವಹಿಸಲು ತೆರಳಿ ನಂತರ ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಮನೆಯ ಮುಂಬಾಗಲಿನ ಬೀಗವನ್ನು ತೆಗೆದಿದ್ದು ಕಂಡುಬಂದಿದೆ. ಮನೆ ಒಳಪ್ರವೇಶಿಸಿ ನೋಡಿದಾಗ ಮನೆಯ ಗಾಡ್ರೇಜ್ ತೆರೆದಿದ್ದು, ಪರಿಶೀಲಿಸಿದಾಗ ಗಾಡ್ರೇಜ್ ಒಳಗೆ ಪರ್ಸ್‌ನಲ್ಲಿಟ್ಟಿದ್ದ ಅಂದಾಜು 25,000 ರೂ. ಹಣ ಮತ್ತು 1,15,000 ರೂ. ಮೌಲ್ಯದ ಸುಮಾರು 23 ಗ್ರಾಂ. ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ. ಸುಬ್ರಹ್ಮಣ್ಯ ಪೊಲೀಸರು ಹಾಗೂ ತನಿಖಾ ತಂಡದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.