
ಜನಪದದಿಂದ ಸಹಬಾಳ್ವೆಯ ಮೌಲ್ಯದ ಪ್ರಸರಣ: ಡಾ. ಬಿ.ವಿ ವಸಂತ ಕುಮಾರ್
ಉಜಿರೆ: ಜನಪದ ಸಾಹಿತ್ಯವು ನಾನು ಎಂಬ ಪ್ರಜ್ಞೆಯನ್ನು ಕಳೆದು ನಾವು ಎಂಬ ಸಹಬಾಳ್ವೆಯ ಮೌಲ್ಯವನ್ನು ಜನಸಾಮಾನ್ಯರಲ್ಲಿ ಬಿತ್ತುತ್ತದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಬಿ.ವಿ ವಸಂತ ಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ 92ನೇ ಸಾಹಿತ್ಯ ಸಮ್ಮೇಳನದ ಅಧಿವೇಶನದಲ್ಲಿ ’ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಾರ್ಗೋಪಾಯಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ಜನಪದ ಸಾಹಿತ್ಯವೆಂದರೆ ಒಡೆದು ಆಳುವ ಸಂಸ್ಕೃತಿಯಲ್ಲ. ಕೂಡಿ ಬಾಳುವ ಉದ್ಧಾತ ಚಿಂತನೆಗಳಿಂದ ರೂಪುಗೊಂಡಿರುವ ಜೀವನಕ್ರಮವೇ ಜನಪದವಾಗಿದೆ. ಜನವಾಣಿಯಿಂದ ಹುಟ್ಟುಕೊಂಡಿರುವ ಜನಪದ ಸಂಸ್ಕೃತಿ ಉಳಿದಾಗ ಮಾತ್ರ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯ. ಭಾರತ ಮತ್ತು ಜನಪದ ಬೇರೆ ಬೇರೆಯಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಮನುಷ್ಯ ಆತ್ಮ ವಿಕಾಸವನ್ನು ಕಾಣಲು ಜನಪದ ಸಾಹಿತ್ಯ ಅಗತ್ಯವಾಗಿದೆ. ಜನಪದವು ಶ್ರದ್ಧೆ ಮತ್ತು ಭಕ್ತಿಯನ್ನು ಜನರಲ್ಲಿ ಉಳಿಸಿದೆ. ಎಸೆಯುವ ಆಹಾರದಿಂದಲೂ ಪ್ರಾಣಿ, ಪಕ್ಷಿಗಳಿಗೆ ಒಳಿತಾಗಲಿ ಎನ್ನುವ ಚಿಂತನೆ ಜನಪದರದ್ದಾಗಿದೆ. ಸರ್ವೇ ಜನ ಸುಖಿನೋ ಭವಂತು ಎನ್ನುವುದು ಜನಪದರಿಗೆ ಬರಿಯ ಮಾತಿನ ಸಂಗತಿಯಾಗದೆ ಬದುಕಿನ ಅಂಗವಾಗಿ ಅಂತರ್ಗತವಾಗಿದೆ ಎಂದರು.
ರಾಜಾಶ್ರಯದಿಂದ ಜನಪದ ಸಾಹಿತ್ಯದ ಉಳಿವು ಸಾಧ್ಯವಿಲ್ಲ. ಜನರು ಜನಪದ ಸಾಹಿತ್ಯದ ಮೌಲ್ಯಗಳನ್ನು ಅರಿತುಕೊಂಡು ತಮ್ಮ ಬದುಕಿನಲ್ಲಿ ಪಾಲಿಸಬೇಕು. ಶ್ರಮ ಸಂಸ್ಕೃತಿಯ ಅನುಭವಾಮೃತದಿಂದ ಜನಪದ ಸಾಹಿತ್ಯ ಹುಟ್ಟಿದೆ. ದುಃಖದಿಂದ ಹುಟ್ಟಿದ ಸಾಹಿತ್ಯಯ ಎಂದೆಂದಿಗೂ ಮಾನವೀಯ ಮೌಲ್ಯಗಳಿಂದ ಮಿಳಿತವಾಗಿರುತ್ತದೆ ಎಂದು ಅವರು ಹೇಳಿದರು.