
ನಿವೇಶನ ರಚನೆಗೆ ಪಂಚಾಯತ್ ರಸ್ತೆ ಬಳಕೆ: ಸಾಮಾನ್ಯ ಸಭೆಯಲ್ಲಿ ಆಕ್ರೋಶ
ಉಳ್ಳಾಲ: ನಿವೇಶನ ನಿರ್ಮಾಣ ಕ್ಕೆ ಪಂಚಾಯತ್ ರಸ್ತೆ ಬಳಕೆ ಹಾಗೂ ಮನೆಯ ಅರ್ಧ ಗೋಡೆ ಕಾಮಗಾರಿ ಆದ ಬಳಿಕ ಪರವಾನಿಗೆ ನೀಡುವ ಬಗ್ಗೆ ವ್ಯಾಪಕ ವಿರೋಧ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಮಾಡಿದ ಪುರುಷೊತ್ತಮ ಅವರು ಪಿಲಾರ್‌ನಲ್ಲಿ ಒಂದು ಖಾಸಗಿ ಜಾಗವನ್ನು ಸಿಂಗಲ್ ಸೈಟ್ ಲೇಔಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ಸೈಟ್ ರಚನೆಗೆ ಪಂಚಾಯತ್ ರಸ್ತೆ ಮತ್ತು ಸೇತುವೆಯನ್ನು ಬಳಸಲಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು.ಸೈಟ್ ವ್ಯವಹಾರ ಮಾಡುವವರು ಅದರ ಕಾರ್ಯ ಚಟುವಟಿಕೆಗೆ ಪ್ರತ್ಯೇಕ ರಸ್ತೆ ನಿರ್ಮಾಣ ಮಾಡಲಿ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮನೋಜ್ ಅವರು, ಸೈಟ್ ಮಾಡುವವರು ಮೊದಲು ಪ್ರತ್ಯೇಕ ರಸ್ತೆ ಮಾಡಿ ಕಾರ್ಯಾರಂಭ ಮಾಡಲಿ. ಅಲ್ಲದೇ ಮನೆ ಕಟ್ಟಲು ಪಂಚಾಗ ಹಾಕುವ ಮೊದಲೇ ಪಂಚಾಯತ್‌ಗೆ ಮಾಹಿತಿ ನೀಡುತ್ತಿಲ್ಲ. ಮನೆಯ ಅರ್ಧ ಗೋಡೆ ಕಾಮಗಾರಿ ಆದ ಬಳಿಕ ಪುರಸಭೆಗೆ ಮಾಹಿತಿ ನೀಡಿ ಪರವಾನಿಗೆಗೆ ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಪುರಸಭೆ ವ್ಯಾಪ್ತಿಯಲ್ಲಿ ಮನೆಯ ಪಂಚಾಗ ಹಾಕುವ ಮೊದಲೇ ಇಂಜಿನಿಯರ್ ಪರಿಶೀಲನೆ ಆಗಬೇಕು. ನೀವೇಶನ ಪರಿಶೀಲಿಸಿ ಮನೆ ನಿರ್ಮಾಣಕ್ಕೆ ಯೋಗ್ಯ ಎಂದು ಕಂಡುಬಂದಲ್ಲಿ ಪರವಾನಿಗೆ ನೀಡಬೇಕು ಎಂದು ತಿಳಿಸಿದರು. ಈ ಬಗ್ಗೆ ವ್ಯಾಪಕ ಚರ್ಚೆ ಸಭೆಯಲ್ಲಿ ನಡೆಯಿತು.
ಖಾಸಗಿ ಶಾಲೆಯಿಂದ ಸೇವಾ ಶುಲ್ಕ ವಸೂಲಿ ಮಾಡುವ ಬಗ್ಗೆ ಸಭೆಯಲ್ಲಿ ಮುಖ್ಯಾಧಿಕಾರಿ ಮತಡಿ ಪ್ರಸ್ತಾಪಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮನೋಜ್ ಅವರು ವಸೂಲಿ ಮಾಡಿದ ಸೇವಾ ಶುಲ್ಕವನ್ನು ಸರ್ಕಾರಿ ಶಾಲೆ ಅಭಿವೃದ್ಧಿಗೆ ಬಳಸುವಂತೆ ಸಲಹೆ ನೀಡಿದರು.
ಸೋಮೇಶ್ವರ ಪುರಸಭೆ ಹಳೆ ಕಟ್ಟಡವನ್ನು ನೆಲಸಮ ಗೊಳಿಸುವ ಬಗ್ಗೆ ಮುಖ್ಯಾಧಿಕಾರಿ ಮತಡಿ ಪ್ರಸ್ತಾಪಿಸಿದಾಗ ಇಂಜಿನಿಯರ್ ಶ್ರೀಧರ್ ನ್ಯಾಯ್ಕ್ ಅವರು ಕಟ್ಟಡ ನೆಲಸಮ ಗೊಳಿಸುವ ಕಾರ್ಯ ನಗರೋತ್ಥಾನ ವತಿಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯರು ಕಟ್ಟಡದಲ್ಲಿರುವ ಉಪಯುಕ್ತ ಸಾಮಾಗ್ರಿಗಳನ್ನು ಕೆಡವಿದ ದಿನದಂದೇ ಏಲಂ ಮಾಡಬೇಕು ಎಂದು ಸಲಹೆ ನೀಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಸ್ಥರಿಗೆ ನೆಲ ಬಾಡಿಗೆ ವಿಧಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ವಾದಾಗ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಪಂಚಾಯತ್ ವತಿಯಿಂದ ತುರ್ತು ಸಂದರ್ಭದಲ್ಲಿ ಜನರು ಪಡೆದು ಕೊಳ್ಳುವ ನಿರಾಕ್ಷೇಪಣಾ ಪತ್ರ,ದೃಢಪತ್ರ, ಕಟ್ಟಡ ಪೂರ್ಣತಾ ಪತ್ರಗಳಿಗೆ ದರ ವಿಧಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಎಲ್ಲರ ಸಹಮತ ವ್ಯಕ್ತವಾಯಿತು.
ಪುರಸಭೆಗೆ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಹಾಗೂ ಬಿಜೆಪಿಯ 9 ಸದಸ್ಯರನ್ನು ಸೇರಿಸಿ ಸ್ಥಾಯಿ ಸಮಿತಿ ರಚನೆ ಮಾಡುವ ಬಗ್ಗೆ ಉಪಾಧ್ಯಕ್ಷ ರವಿಶಂಕರ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಹಮತ ವ್ಯಕ್ತಪಡಿಸಿದ ಸದಸ್ಯರು ಒಂದು ವಾರದೊಳಗೆ ರಚನೆ ಮಾಡಬೇಕು ಎಂದು ತಿಳಿಸಿದರು.
ಉಚ್ಚಿಲ, ಬೀರಿ ಮುಂತಾದ ಕಡೆ ಸರ್ವಿಸ್ ರಸ್ತೆ ಇದ್ದರೂ ಸಿಟಿ ಬಸ್‌ಗಳು ಹೆದ್ದಾರಿಯಲ್ಲಿ ನಿಲ್ಲಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಈಗಾಗಲೇ ಕೆಲವು ಕಡೆ ಅಪಘಾತ ಸಂಭವಿಸಲು ನಿಗದಿತ ನಿಲ್ದಾಣದಲ್ಲಿ ನಿಲ್ಲಸಿರುವುದು ಕಾರಣ ಎಂದು ಸದಸ್ಯ ಅಬ್ದುಲ್ ಸಲಾಂ ಸಭೆಯಲ್ಲಿ ಪ್ರಸ್ತಾಪಿಸಿದಾಗ ವ್ಯಾಪಕ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಇತರ ಸದಸ್ಯರು ಕೊಲ್ಯ,ಸಂಕೋಲಿಗೆ ಸರ್ವಿಸ್ ರಸ್ತೆ ಇಲ್ಲದೇ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರವಿಶಂಕರ್ ಅವರು ಹೆದ್ದಾರಿ ಸರ್ವಿಸ್ ರಸ್ತೆ ಸಮಸ್ಯೆ ಬಗ್ಗೆ ಸಂಸದ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದಿದ್ದೇವೆ. ಶೀಘ್ರ ಸರ್ವಿಸ್ ರಸ್ತೆಯ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದರು.
ಈ ಸಭೆಯಲ್ಲಿ ವಿಕಲಚೇತನರ ಯೋಜನೆಯಡಿ 12 ಮಂದಿ ಫಲಾನುಭವಿಗಳಿಗೆ ಹಾಗೂ ಬಡಜನರ ಯೋಜನೆಯಡಿ ವೈದ್ಯಕೀಯ ವೆಚ್ಚಕ್ಕೆ ಅರ್ಜಿ ಸಲ್ಲಿಸಿದ 25 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.