
ಅನಧಿಕೃತ ಪ್ರಾಣಿ ಸಂಗ್ರಹಾಲಯ ತೆರವಿಗೆ ಕಾರ್ಯಾಚರಣೆ - ಸ್ಥಳೀಯರ ವಿರೋಧ
ಕುಂದಾಪುರ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಾಲಯದ ಬಳಿ ಅನಧಿಕೃತವಾಗಿ ಕಾರ್‍ಯಾಚರಿಸುತ್ತಿದ್ದ ಪ್ರಾಣಿ ಸಂಗ್ರಹಾಲಯವನ್ನು ತೆರವುಗೊಳಿಸಿ ಇಲ್ಲಿನ ಪ್ರಾಣಿ, ಪಕ್ಷಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ನೋಟೀಸು ನೀಡಲು ಆಗಮಿಸಿದ ಪಶುಪಾಲನಾ ಇಲಾಖೆ ಅಧಿಕಾರಿಗಳ ವರ್ತನೆಗೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದ ಘಟನೆ ಜ.31 ರಂದು ನಡೆದಿದೆ.
ಇಲ್ಲಿ ಪ್ರಾಣಿ, ಪಕ್ಷಿಗಳನ್ನು ಕಾನೂನಾತ್ಮಕವಾಗಿ ಪಾಲನೆ ಮಾಡುತ್ತಿಲ್ಲ ಎಂದು ಸ್ವಯಂ ಸೇವಾ ಸಂಘಟನೆಯೊಂದು ದೂರು ನೀಡಿತ್ತು. ಆ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿದ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಇಲ್ಲಿನ ಪ್ರಾಣಿ, ಪಕ್ಷಿಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಪಶುಪಾಲನೆ ಇಲಾಖೆಯವರಿಗೆ ಆದೇಶ ನೀಡಿದ್ದರು. ಅದರಂತೆ ಇಲ್ಲಿರುವ ಪ್ರಾಣಿಗಳ ಬಗ್ಗೆ ಅಧಿಕಾರಿಗಳು ವರದಿ ಸಿದ್ಧಪಡಿಸಿ, ನೋಟೀಸು ನೀಡಲು ಆಗಮಿಸಿದ್ದರು.
ಸ್ಥಳೀಯರ ಆಕ್ಷೇಪ:
ಗಾಯಗೊಂಡ ಹಾಗೂ ಅಪಘಾತ ಮುಂತಾದ ನೋವಿನಿಂದ ಬಳಲುತ್ತಿರುವ ನಾಯಿ, ಹಾವು, ಹಕ್ಕಿ ಮೊದಲಾದವುಗಳನ್ನು ಮನೆಗೆ ತಂದು ಈ ಕೇಂದ್ರದ ಸುಧೀಂದ್ರ ಐತಾಳರು ಆರೈಕೆ ಮಾಡುತ್ತಾರೆ. ಗಾಯಗೊಂಡ ಪ್ರಾಣಿ, ಪಕ್ಷಿಗಳ ಆರೈಕೆ ಮಾಡಿ ಜೀವ ಉಳಿಸುತ್ತಾರೆ.
ಸಂಘ-ಸಂಸ್ಥೆಗಳ ದೂರಿನಿಂದ ಬೇಸತ್ತು ಅವರು ಈ ಕೆಲಸದಿಂದ ಹಿಂದೆ ಸರಿದರೆ ಮುಂದೆ ಇವುಗಳ ರಕ್ಷಣೆ ಮಾಡುವವರು ಯಾರು. ಆಡಳಿತ ವ್ಯವಸ್ಥೆ ಐತಾಳರಿಗೆ ಕಿರುಕುಳ ನೀಡದೆ ಅವರ ಕಾರ್‍ಯಕ್ಕೆ ಕಾನೂನು ರೀತಿಯಲ್ಲಿ ಸಹಕಾರ ನೀಡಬೇಕು ಎಂದು ರಾಜ್ಯ ಮಾನವ ಹಕ್ಕು ಪ್ರತಿಷ್ಠಾನದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಮೊದಲಾದವರು ಅಧಿಕಾರಿಗಳೊಂದಿಗೆ ವಾದ ನಡೆಸಿದರು. ಈ ಬಗ್ಗೆ ನೋಟೀಸು ಪಡೆಯುವುದಿಲ್ಲ, ಜಿಲ್ಲಾಡಳಿತ ಇನ್ನೂ ಕಿರುಕುಳ ನೀಡಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರೇ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಅನಂತರ ಮನೆಯ ಗೊಡೆಗೆ ನೋಟೀಸು ಅಂಟಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಅಧಿಕಾರಿಗಳು ಸ್ಥಳದಿಂದ ತೆರಳಿದರು ಹಾಗೂ ಘಟನೆ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿಯೂ ತಿಳಿಸಿದರು.
ಸ್ಥಳೀಯಾಡಳಿತ ವತಿಯಿಂದ ಕೂಡ ಈ ಬಗ್ಗೆ ನೋಟೀಸು ಜಾರಿ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದರು.
ಹಿಂದೊಮ್ಮೆ ಕಾರ್ಯಾಚರಣೆ:
ಈ ಹಿಂದೆ ಜ.11ರಂದು ಜಿಲ್ಲಾಡಳಿತದ ಸೂಚನೆಯಂತೆ 130 ನಾಯಿಗಳು ಹಾಗೂ ಬೆಕ್ಕುಗಳನ್ನು ವಶಕ್ಕೆ ಪಡೆದು ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಇನ್ನೂ ಕೂಡ ಸಾಕಷ್ಟು ಪ್ರಾಣಿಗಳು ಇರುವುದರಿಂದ ಇವುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಲಾಗಿತ್ತು.
ಪಶುಪಾಲನೆ ಇಲಾಖೆಯ ಉಡುಪಿ ಉಪನಿರ್ದೇಶಕ ಡಾ.ಎಂ.ಸಿ. ರೆಡ್ಡಪ್ಪ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ ಕುಮಾರ್, ಮುಖ್ಯ ಪಶುವೈದ್ಯ ಡಾ. ಪ್ರದೀಪ್, ಡಾ. ಸೂರಜ್, ಅಜೇಯ್ ಹಾಗೂ ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಅಜೆಯ್ ಭಂಡಾರ್ಕರ್ ಮತ್ತು ಸಿಬಂದಿ, ಕೋಟ ಠಾಣೆಯ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾಪ್ರಭು ಮೊದಲಾದವರು ಈ ವೇಳೆ ಇದ್ದರು. ಮಾತಿನ ಚಕಮಕಿಯ ವೇಳೆ ಕುತೂಹಲಿಗಳ ದೊಡ್ಡ ದಂಡೇ ನೆರೆದಿತ್ತು.