
ಜ.25, 26ರಂದು ಕಡಲ ಪರ್ಬ
ಮಂಗಳೂರು: ಕರಾವಳಿ ಪ್ರದೇಶದ ಯವ ಸಂಘಟನೆ, ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜ.25 ಮತ್ತು 26ರಂದು ಕುಳಾಯಿ ಚಿತ್ರಾಪುರದ ಪಿ.ಎಂ.ಎಸ್. ಮೈದಾನದಲ್ಲಿ ಕಡಲ ಪರ್ಬ ಆಯೋಜಿಸಲಾಗಿದೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕಡಲ ಪರ್ಬ ಸಮಿತಿಯ ಅಧ್ಯಕ್ಷ ದೇವದಾಸ್ ಕುಳಾಯಿ, ಈ ಕಾರ್ಯಕ್ರಮದಲ್ಲಿ ವಿಶೇಷ ಮನರಂಜನೆ, ಆಹಾರ ಮೇಳ ಹಾಗೂ ಸ್ಥಳೀಯ ಜನಪ್ರಿಯ ಕ್ರೀಡೆಗಳ ಸ್ಪರ್ಧೆ ನಡೆಯಲಿದೆ ಎಂದರು.
ಜ. 25ರಂದು ದೋಣಿ ಸ್ಪರ್ಧೆ ಪುರುಷರಿಗಾಗಿ, ಮಹಿಳೆಯರಿಗಾಗಿ ಮ್ಯೂಜಿಕಲ್ ಚೇರ್ ಸ್ಪರ್ಧೆ ನಡೆಯಲಿದೆ. ಪುರುಷರು ಹಾಗೂ ಮಹಿಳೆಯರಿಗೆ ವಾಲಿಬಾಲ್ ಸ್ಪರ್ಧೆಗಳನ್ನು ಬೀಚ್ನಲ್ಲಿ ಆಯೋಜಿಸಲಾಗಿದೆ. ಜ.26ರಂದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ.
ಮನರಂಜನಾ ಕಾರ್ಯಕ್ರಮವಾಗಿ ಜ. 25ರಂದು ಹುಲಿ ಕುಣಿತ ಹಾಗೂ ‘ಎನ್ನಂದಿನ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಜ. 26ರಂದು ಉಳ್ಳಾಲದ ರಾಣಿ ಅಬ್ಬಕ್ಕನ ವೀರಗಾಥೆ ಲೇಸರ್ ಶೋ, ಜಾನಪದ ವೈಭವ ಹಾಗೂ ಸಂಗೀತ ಸಂಜೆ ನಡೆಲಿದೆ. ಜ. 26ರಂದು ಬೆಳಗ್ಗೆ ಯೋಗ ಮತ್ತು ಜುಂಬಾ ಪ್ರದರ್ಶನ ಕಡಲ ತೀರದಲ್ಲಿ ನಡೆಯಲಿದೆ.
ದೋಣಿ ಸ್ಪರ್ಧೆಯು ಡಬಲ್ ಇಂಜಿನ್ ಚಾಲಿತ ನಾಡದೋಣಿಗಳಲ್ಲಿ ತಲಾ 5 ಮಂದಿ ಸ್ಪರ್ಧಿಗಳೊಂದಿಗೆ ನಡೆಯಲಿದೆ. ಕನಿಷ್ಟ 25 ದೋಣಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದಲ್ಲದೆ ಸಮುದ್ರ ತೀರದಲ್ಲಿ 30 ನಿಮಿಷಗಳ ಕಾಲ ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಡಲ ಪರ್ಬ ಸಮಿತಿಯ ಪುರುಷೋತ್ತಮ ಚಿತ್ರಾಪುರ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಇತರ ಪ್ರಮುಖರಾದ ಕುಮಾರ್ ಮೆಂಡನ್, ರಮೇಶ್ ಮುಕ್ಕ, ಸಂಜಯ್ ಬೆಂಗ್ರೆ ಉಪಸ್ಥಿತರಿದ್ದರು.