
ಜ.30-ಫೆ.13 ರವರೆಗೆ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮ’
ಮಂಗಳೂರು: ಜ.30 ರಿಂದ ಫೆ.13 ರವರೆಗೆ ಜಿಲ್ಲೆಯಾಧ್ಯಂತ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮ’-2025 ನಡೆಯಲಿದೆ ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಸುದರ್ಶನ್ ಹೇಳಿದರು.
ಅವರು ಇಂದು ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ‘ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಕುಷ್ಠರೋಗದ ಜಾಗೃತಿಯನ್ನು ಮೂಡಿಸಲಾಗುವುದು ಎಂದರು.
ಜ.30 ರಂದು ಪ್ರತಿಜ್ಞಾವಿಧಿ ಬೋಧಿಸಲಾಗುವುದು. 15 ದಿನಗಳ ಕಾಲ ನಡೆಯುವ ಈ ಆಂದೋಲನಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಕುಷ್ಠರೋಗಿಗಳ ಬಗ್ಗೆ ತಾರತಮ್ಯ ಮಾಡದಂತೆ ಮಾಹಿತಿ ನೀಡುವುದು, ಕುಷ್ಠರೋಗಿಯ ಬಗ್ಗೆ ಸಾರ್ವಜನಿಕರು ತೋರುವ ತಾರತಮ್ಯವನ್ನು ಹೋಗಲಾಡಿಸಲು ಕುಷ್ಠರೋಗಿಗಳನ್ನು ಸಭೆಗಳಲ್ಲಿ ಮುಖ್ಯ ಅತಿಥಿಯಾಗಿ ಘೋಷಿಸುವುದು., ಗುಣಮುಖರಾದ ಕುಷ್ಠರೋಗಿಗಳಿಗೆ ಸಾರ್ವಜನಿಕವಾಗಿ ಗ್ರಾ.ಪಂ. ಅಧ್ಯಕ್ಷರಿಂದ ಸನ್ಮಾನಿಸಿ ಕುಷ್ಠರೋಗದ ಬಗ್ಗೆ ಕುಷ್ಠರೋಗಿಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಿಸುವುದು., ಆಶಾ ಕಾರ್ಯಕರ್ತೆಯರಿಗೆ ಹಾಗೂ ಇತರ ಕ್ಷೇತ್ರ ಸಿಬ್ಬಂದಿಗಳಿಗೆ ಹಾಗೂ ಕುಷ್ಠರೋಗಿಯ ಬಗ್ಗೆ ತಾರತಮ್ಯವನ್ನು ನಿರ್ಮೂಲನಗೊಳಿಸಲು ತರಬೇತಿ ನೀಡಿ ಅವರ ಮೂಲಕ ಪ್ರತಿ ಮನೆಗೆ ಈ ಮಾಹಿತಿಯನ್ನು ತಲುಪಿಸುವುದು., ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅವರ ಬೆಳಗ್ಗಿನ ಪ್ರರ್ಥಾನಾ ಸಮಯದಲ್ಲಿ ಕ್ಷೇತ್ರ ಸಿಬ್ಬಂದಿಗಳ ಮೂಲಕ ಕುಷ್ಠರೋಗದ ಬಗ್ಗೆ ಮಾಹಿತಿ ನೀಡುವುದು., ಎಲ್ಲಾ ಗ್ರಾಮ ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಭೆಯಲ್ಲಿ ಸಭಿಕರಿಗೆ ಕುಷ್ಠರೋಗದ ಬಗ್ಗೆ ಮಾಹಿತಿ ನೀಡುವುದು., ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓಗಳನ್ನು ಸಂಪರ್ಕಿಸಿ ಅವರ ಸಹಯೋಗದೊಂದಿಗೆ ಕುಷ್ಠರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮೈಕಿಂಗ್, ಬ್ಯಾನರ್, ಕರಪತ್ರ, ಮುದ್ರಣ, ಜಾಥಾ, ಕ್ವಿಜ್ ಇತ್ಯಾದಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಈ 15 ದಿನಗಳಲ್ಲಿ ಜ.30 ರಂದು ವಿಟ್ಲ ಪಿ.ಯು. ಕಲೇಜಿನಲ್ಲಿ, ಜ.31 ರಂದು ಕೋಟೆಕರ್ ಒಲವಿನ ಹಳ್ಳಿ ಆಶ್ರಮದಲ್ಲಿ, ಫೆ.1 ರಂದು ಕೂಳೂರಿನ ವಿದ್ಯಾಜ್ಯೋತಿ ಶಾಲೆಯಲ್ಲಿ, ಫೆ.4 ರಂದು ಹಳೆಯಂಗಡಿ ನಾರಾಯಣ ಸನಿಲ್ ಶಾಲೆಯಲ್ಲಿ, ಫೆ.5 ರಂದು ಜಿಲ್ಲಾ ಕಾರಾಗೃಹದಲ್ಲಿ, ಫೆ.6 ರಂದು ಪಡೀಲ್‌ನ ಕೇಂಬ್ರಿಡ್ಜ್ ಶಾಲೆಯಲ್ಲಿ, ಫೆ.11 ರಂದು ಕನ್ಯಾನದ ಭಾರತಿ ಸೇವಾ ಆಶ್ರಮದಲ್ಲಿ, ಫೆ.12 ರಂದು ವಾಮಂಜೂರಿನ ನಿರಾಶ್ರಿತ ಕೇಂದ್ರದಲ್ಲಿ ಶಿಬಿರಗಳು ನಡೆಯಲಿದ್ದು, ಫೆ.3 ರಂದು ವೆನ್‌ಲಾಕ್ ಆಸ್ಪತರೆಯಲ್ಲಿ ಹಾಗೂ ಫೆ.7 ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಡಿಪಿಎಂಆರ್ ಶಿಬಿರ ನಡೆಯಲಿದೆ ಎಂದು ಹೇಳಿದರು.
ಇಲ್ಲಿ ಚರ್ಮ ರೋಗ ತಜ್ಞರು ಭಾಗವಹಿಸಲಿದ್ದು, ಉತ್ತಮ ತಪಾಸಣೆ ನಡೆಸಿ, ಉಚಿತ ಮದ್ದು ನೀಡಲಿದ್ದಾರೆ, ನಡೆದಾಡಲು ಆಗದವರಿಗೆ ವೀಲ್‌ಚೇರ್ ಹಾಗೂ ಬೇಕಾದ ಸಾಧನಗಳನ್ನು ವಿತರಿಸಲಾಗುವುದು., ಗಾಯ ಆದವರಿಗೆ ಚಿಕಿತ್ಸೆ ಹಾಗೂ ಉತ್ತಮ ಪಾದರಕ್ಷೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಡಿಮೆ ರೋಗಿಗಳು:
ರಾಜ್ಯದಲ್ಲಿ 1785 ಜನರು ಕುಷ್ಠರೋಗಕ್ಕೆ ಒಳಗಾಗಿದ್ದು, ಜಿಲ್ಲೆಯಲ್ಲಿ ಈ ವರ್ಷ 30 ಜನ ಮಾತ್ರ ರೋಗಿಗಳು ಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಜನರು ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 72 ಜನ ಆನ್‌ಲೈನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ. ಸುದರ್ಶನ್ ಹೇಳಿದರು.