ಡಿಜಿಟಲ್ ಯುಗದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ: ಶ್ರೀಧರ್ ಎನ್ಕಮಜೆ

ಡಿಜಿಟಲ್ ಯುಗದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ: ಶ್ರೀಧರ್ ಎನ್ಕಮಜೆ


ಮಂಗಳೂರು: ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನ ಒಳಗೆ ಬದುಕುತ್ತಿದ್ದೇವೆ. ಹಾಗಾಗಿ ಗ್ರಾಹಕ ಹಿತರಕ್ಷಣಾ ಕಾನೂನಿನ ಬಗೆಗೆ ಜಾಗೃತಿ ಹೊಂದಿರುವುದು ಈ ಹೊತ್ತಿನ ಅಗತ್ಯ ಎಂದು ಮಂಗಳೂರು ಬಾರ್ ಅಸೋಸಿಯೇಶನ್ನ ಮಾಜಿ ಸಾಮಾನ್ಯ ಕಾರ್ಯದರ್ಶಿ ಶ್ರೀಧರ್ ಎನ್ಕಮಜೆ ಹೇಳಿದರು. 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಪಿ.ಎಫ್. ಪ್ರಥಮ ದರ್ಜೆ ಕಾಲೇಜು, ನಡುಪಡವು, ಕೊಣಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಹಕ ಹಿತರಕ್ಷಣಾ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಪಿ.ಎಫ್. ಪ್ರಥಮ ದರ್ಜೆ ಕಾಲೇಜುಗಳ ನಡುವಿನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಗ್ರಾಹಕ ಹಿತರಕ್ಷಣಾ ವೇದಿಕೆ ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ಇದ್ದು, ಅಗತ್ಯ ಬಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲೂ ದೂರ ದಾಖಲಿಸಲು ಅವಕಾಶವಿದೆ. ತಂತ್ರಜ್ಞಾನ ಬೆಳವಣಿಗೆ ಹೊಂದಿದಂತೆ ಗ್ರಾಹಕ ಹಕ್ಕು ಕಾಯ್ದೆಯಲ್ಲೂ ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. ಮಾರಾಟಗಾರರು ಮಾರಾಟ ಮಾಡುವ ಯಾವುದೇ ವಸ್ತುವಿನಲ್ಲೂ ದೋಷವಿದ್ದಲ್ಲಿ ಅದರ ಸಂಪೂರ್ಣ ಜವಾಬ್ದಾರಿ ಆತನ ಮೇಲಿರುತ್ತದೆ. ಈ ಹೊತ್ತಿಗೆ ಪ್ರತಿ ಗ್ರಾಹಕರ ಬಗ್ಗೆಯೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.

ಪಿ.ಎಫ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸರ್ಫರಾಜ್ ಹಸೀಂ, ಡಿಜಿಟಲ್ ಯುಗದಲ್ಲಿ ಇಂತಹ ಒಪ್ಪಂದಗಳ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗಿರುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ ಈ ಕುರಿತು ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಮೋಸ ಹೋದ ಸಂದರ್ಭದಲ್ಲಿ ಮೌಖಿಕ ದೂರಿಗಿಂತ ಲಿಖಿತ ದೂರುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ. ಎ. ಸಿದ್ಧಿಕ್ ಪ್ರಾಸ್ತಾವಿಕವಾಗಿ, ಭ್ರೂಣದಲ್ಲಿರುವ ಶಿಶುವಿನಿಂದ ಹಿಡಿದು ಸಾವನ್ನಪ್ಪಿದ ವ್ಯಕ್ತಿಯವರೆಗೂ ಎಲ್ಲರೂ ಗ್ರಾಹಕರೇ ಆಗಿರುತ್ತಾರೆ. ವಿದ್ಯಾವಂತರೇ ಮೋಸ ಹೋಗುತ್ತಿರುವ ಈ ಕಾಲದಲ್ಲಿ ಗ್ರಾಮೀಣ ಭಾಗದ ಜನರ ಪಾಡೇನು? ಎಂದು ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ದೇಶದಲ್ಲಿ ಇಂದಿಗೂ ಗ್ರಾಹಕರ ಪರವಾಗಿ ಮಾತನಾಡುವ ಧ್ವನಿ ಇಲ್ಲವಾಗಿರುವುದು ವಿಷಾದನೀಯ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಆನ್‌ಲೈನ್ ಶಾಪಿಂಗ್ ಮಾಡುತ್ತಿರುವ ಈ ಯುಗದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಒಪ್ಪಂದಗಳು ಸಮಾಜಮುಖಿಯಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕಾರಾತ್ಮಕ ಬದಲಾವಣೆಗೆ ಕಾರಣೀಭೂತವಾಗಿಲಿ ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ ಪೇಜ್ ನಾಲೆಡ್ಜ್ ಸಿಟಿಯ ಎಜಿಎಂ ಶರ್ಫರುದ್ಧೀನ್ ಪಿ.ಕೆ., ಪಿಯೆಟ್ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಮುಖ್ಯಸ್ಥ ಡಾ. ಸಯ್ಯದ್ ಅಮೀನ್ ಅಹ್ಮದ್, ವಿಶ್ವವಿದ್ಯಾನಿಲಯ ಕಾಲೇಜಿನ ಪದವಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಧಾ ಎನ್. ವೈದ್ಯ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್. ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article