
ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಸಚಿವ ಪ್ರಹ್ಲಾದ ಜೋಶಿ
ಮಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಪ್ರಜಾಪ್ರಭುತ್ವದ ನೆಲೆಯಲ್ಲಿ ಬಿಜೆಪಿ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ ಎಂದು ಎಂದು ಕೇಂದ್ರ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಖಾತೆಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದ ಚುನಾವಣೆಗಳು ನಡೆದಿದೆ, ಮಂಡಲ ಹಂತದ ಚುನಾವಣೆ ನಡೆಯುತ್ತಿದೆ. ನಂತರ ಜಿಲ್ಲಾ, ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ನಡೆಯುತ್ತದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರರವರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಅವರು ಚುನಾವಣೆ ಮೂಲಕ ಆಯ್ಕೆಯಾದುದಲ್ಲ. ಚುನಾವಣೆಯಲ್ಲಿ ಈಗಿನ ಅಧ್ಯಕ್ಷರೇ ಮತ್ತೊಮ್ಮೆ ಆಯ್ಕೆಯಾಗಲೂ ಬಹುದು ಎಂದರು.
ಕಾಂಗ್ರೆಸ್‌ನವರಂತೆ ಕಾಗದದಲ್ಲಿ ತೋರಿಸಲು ನಾವು ಚುನಾವಣೆ ನಡೆಸುವುದಿಲ್ಲ. ಪಾರದರ್ಶಕವಾಗಿ ಚುನಾವಣೆ ನಡೆಸುತ್ತೇವೆ. ಕೇಂದ್ರ ಸಚಿವರಿಗೆ ಒಂದೊಂದು ರಾಜ್ಯದ ಚುನಾವಣಾ ಉಸ್ತುವಾರಿ ವಹಿಸಲಾಗಿದೆ. ಶಿವರಾಜ್ ಸಿಂಗ್ ಚೌಹಾಣ್‌ರನ್ನು ರಾಜ್ಯದ ಹಾಗೂ ನನ್ನನ್ನು ಕೇರಳದ ಉಸ್ತುವಾರಿಯಾಗಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ಬಿಜೆಪಿ ಒಗ್ಗಟ್ಟಿನಿಂದ ಹೋರಾಡಲಿದೆ. ಪಕ್ಷದೊಳಗಿನ ಏನೇ ಬಿಕ್ಕಟ್ಟುಗಳಿದ್ದರೂ ನಿವಾರಿಸಲು ವ್ಯವಸ್ಥೆ ಇದೆ. ಪ್ರಯತ್ನಗಳಿಗೆ ಫಲ ಸಿಗುವುದು ಕೊಂಚ ತಡವಾಗಬಹುದು ಎಂದರು.