ಮನಪಾ ವ್ಯಾಪ್ತಿಯಲ್ಲಿ ಅಶುದ್ಧ ನೀರು: ಮುಖ್ಯಮಂತ್ರಿಗೆ ವರದಿ

ಮನಪಾ ವ್ಯಾಪ್ತಿಯಲ್ಲಿ ಅಶುದ್ಧ ನೀರು: ಮುಖ್ಯಮಂತ್ರಿಗೆ ವರದಿ

ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಶುದ್ಧೀಕರಿಸದ ನೀರನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಸತ್ಯಶೋಧನಾ ಸಮಿತಿ ರಚಿಸಿರುವ ಕಾಂಗ್ರೆಸ್ ಸದಸ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಅವಲೋಕನದ ವರದಿಯನ್ನು ಒಪ್ಪಿಸಿದ್ದಾರೆ.

ಶುಕ್ರವಾರ ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ನೇತೃತ್ವದಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯರ ಸತ್ಯಶೋಧನಾ ಸಮಿತಿಯ ವರದಿಯನ್ನು ಸಲ್ಲಿಸಲಾಯಿತು.

ಸತ್ಯಶೋಧನಾ ಸಮಿತಿಯು ಪಚ್ಚನಾಡಿ ಎಸ್‌ಟಿಪಿ, ಬೆಂದೂರ್‌ವೆಲ್ ನೀರು ಸರಬರಾಜು ಘಟಕ, ಮುಚ್ಚೂರು ವೆಟ್‌ವೆಲ್‌ಗೆ  ಭೇಟಿ ನೀಡಿರುವ ಸಂದರ್ಭ ಅಲ್ಲಿ ಕಂಡು ಬಂದಿರುವ ನ್ಯೂನ್ಯತೆಗಳು ಹಾಗೂ ಅದಕ್ಕೆ ಅಗತ್ಯ ಪರಿಹಾರೋಪಾಯಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ ಕಲುಷಿತಗೊಂಡಿರುವ ನದಿಗಳಲ್ಲಿ ಜಿಲ್ಲೆಯ ಜೀವನದಿಯಾದ ನೇತ್ರಾವತಿಯೂ ಸೇರಿರುವ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯು ತಿಳಿಸಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಶುದ್ಧೀಕರಿಸದೆ ಕುಡಿಯುವ ನೀರು ನೀಡಲಾಗುತ್ತಿರುವ ಬಗ್ಗೆ ಈಗಾಗಲೇ ಮನಪಾ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ವಿಪಕ್ಷ ನಾಯಕರ ಸಹಿತ ಸದಸ್ಯರು ಆಕ್ಷೇಪಿಸಿ, ಸತ್ಯಶೋಧನಾ ಸಮಿತಿ ರಚನೆಗೆ ಆಗ್ರಹಿಸಿದ್ದರು. ಆದರೆ ಪಾಲಿಕೆ ಆಡಳಿತ ಈ ಬಗ್ಗೆ ನಿರಾಕರಣೆ ತೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆ ಕಾಮಗಾರಿ ಶೀಘ್ರವಾಗಿ ಮುಗಿಸಬೇಕು. ಪಾಲಿಕೆಯಲ್ಲಿ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಅರೇಕಳದಲ್ಲಿ ಮತ್ತೊಂದು ನೀರಿನ ರೇಚಕ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಸಮಂಜಸ ಮಾಹಿತಿಯನ್ನು ಒದಗಿಸುವ ಜತೆಗೆ ಎಲ್ಲಾ ಎಸ್ಟಿಪಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಅದನ್ನು ಪಾಲಿಕೆಯ ಕಂಟ್ರೋಲ್ಗೆ ಒಳಪಡಿಸುವ ಕ್ರಮಕ್ಕೆ ಸಮಿತಿಯು ಆಗ್ರಹಿಸಿದೆ.

ಬೆಂದೂರ್‌ವೆಲ್‌ನಲ್ಲಿ ನೀರು ಸರಬರಾಜು ಘಟಕದಲ್ಲಿ ತುಂಬೆಯ ಒಂದು ನೀರಿನ ಪೈಪ್‌ಲೈನ್ ನೇರವಾಗಿ ಪಣಂಬೂರು ಕಡೆಗೆ ಪ್ರಾಥಮಿಕ ಶುದ್ಧೀಕರಿಸಿದ ನೀರು ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ. ಜಪ್ಪಿನಮೊಗರು ವೆಟ್‌ವೆಲ್‌ಗೆ ಭೇಟಿ ನೀಡಿದ ವೇಳೆ ಸ್ಥಳೀಯ ಪಂಪ್‌ಹೌಸ್  ಸ್ಥಗಿತಗೊಂಡು ಕೊಳಚೆ ನೀರು ರಾಜಕಾಲುವೆ, ತೋಡುಗಳಲ್ಲಿ ಹರಿಯುತ್ತಿರುವುದರ ಪರಿಣಾಮ ಸಮೀಪದ ಬಾವಿಗಳು ಕಲುಷಿತಗೊಂಡಿರುವುದು ಕಂಡುಬಂದಿದೆ. ಸುರತ್ಕಲ್ ಮಧ್ಯ ಎಸ್‌ಟಿಪಿಯಲ್ಲಿ ಸಿಬ್ಬಂದಿಯೇ ಇಲ್ಲವಾಗಿದ್ದು, ಕಳೆದೊಂದು ತಿಂಗಳನಿಂದ ಜನರೇಟರ್ ವ್ಯವಸ್ಥೆಯಿಲ್ಲದೆ ಘಟಕ ನಿಷ್ಕ್ರಿಯವಾಗಿದೆ. ವಾರ್ಷಿಕ 1.5 ಕೋಟಿ ರೂ. ನಿರ್ವಹಣಾ ವೆಚ್ಚವಾಗಿ ನೀಡಲಾಗುತ್ತಿದ್ದರೂ ಎಸ್ಟಿಪಿಗಳನ್ನು ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ವರದಿಯಲ್ಲಿ ದೂರಲಾಗಿದೆ.

ಕಾವೂರು ಮಾದರಿಯಲ್ಲಿ ಪಚ್ಚನಾಡಿ ಮತ್ತು ಬಜಾಲ್ ಎಸ್‌ಟಿಪಿಗಳನ್ನು ಎಂಆರ್‌ಪಿಎಲ್‌ಗೆ ಹಸ್ತಾಂತರಿಸುವ ಹಾಗೂ ಅವರ ಮೂಲಕ ಅಭಿವೃದ್ಧಿ ಮಾಡುವ ಕ್ರಮ ಆಗಬೇಕು ಎಂದೂ ವರದಿಯಲ್ಲಿ ಸಲಹೆ ನೀಡಲಾಗಿದೆ. ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article