
ಆಕರ್ಷಕ ಪಥ ಸಂಚಲನ-ಪುಟಾಣಿಗಳ ಸಾಂಸ್ಕೃತಿಕ ವೈಭವ
Sunday, January 26, 2025
ಮಂಗಳೂರು: ನೆಹರೂ ಮೈದಾನದಲ್ಲಿ ಭನುವಾರ ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಮೀಸಲು ಪೊಲೀಸ್, ನಗರ ಸಶಸ್ತ್ರ, ದ.ಕ. ಜಿಲ್ಲಾ ಪೊಲೀಸ್, ನಗರ ಸಂಚಾರಿ ಪೊಲೀಸ್, ಅಬಕಾರಿ, ನಾಗರಿಕ ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕ ದಳ, ಪೊಲೀಸ್ ವಾದ್ಯವೃಂದ ತಂಡಗಳ ಜತೆಗೆ, ಸಂತ ತೆರೆಸಾ, ಶಾರದಾ ವಿದ್ಯಾಲಯ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಲ್ಲಕಾಡು, ಸೈಂಟ್ ಆಗ್ನೆಸ್ ಸೇರಿ ಆರು ಶಾಲಾ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.
ಹರಿಯಾಣ ಮೂಲದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮನೀಶಾ ಮನೋಹಿ ಪಥ ಸಂಚಲನದ ದಂಡನಾಯಕಿಯಾಗಿದ್ದರೆ, ಉಪ ದಂಡನಾಯಕರಾಗಿ ಬಾಗಣ್ಣ ವಾಲಿಕರ್ ಕಾರ್ಯ ನಿರ್ವಹಿಸಿದರು. 2023ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮನೀಶಾ ಮನೋಹಿ ಡಿಸೆಂಬರ್‌ನಲ್ಲಿ ದ.ಕ. ಜಿಲ್ಲೆಗೆ ಎಎಸ್ಪಿಯಾಗಿ ಆಗಮಿಸಿದ್ದು, ಆನ್‌ಲೈನ್ ಮೂಲಕ ಕನ್ನಡ ಕಲಿಯುತ್ತಿರುವ ಅವರು ಪಥ ಸಂಚಲನದಲ್ಲಿ ಕನ್ನಡದಲ್ಲಿಯೇ ಕಮಾಂಡ್ ನೀಡುವ ಮೂಲಕ ಗಮನ ಸೆಳೆದರು.
ಪಥ ಸಂಚಲನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಎನ್‌ಸಿಸಿ ಆರ್ಮಿ ತಂಡ ಪ್ರಥಮ ಸ್ಥಾನದೊಂದಿಗೆ ರೋಲಿಂಗ್ ಶೀಲ್ಡ್ ಪಡೆದರೆ, ಸರಕಾರಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಲ್ಲಕಾಡು ಶಾಲೆಯ ಭಾರತ ಸೇವಾದಳ ತಂಡ ದ್ವಿತೀಯ ಸ್ಥಾನ ಪಡೆಯಿತು.
ಬಳಿಕ ನೆಹರೂ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೋಳೂರಿನ ಅಮೃತ ವಿದ್ಯಾಲಯದ 120 ಮಕ್ಕಳು, ಅಶೋಕನಗರ ಎಸ್.ಸಿಎಸ್. ರಿವರ್ ಸೈಡ್ ಸ್ಕೂಲ್, ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‌ನ ಪುಟಾಣಿಗಳು ದೇಶ ಭಕ್ತಿಯ ನೃತ್ಯ ಪ್ರದರ್ಶಿಸಿದರು. ಕೆನರಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಮಧುಸೂಧನ್ ಕುಶೆ ಪ.ಪೂ. ಕಾಲೇಜು ವಿದ್ಯಾರ್ಥಿಗಳು ನೃತ್ಯ, ಪ್ರಹಸನ ಪ್ರದರ್ಶನ ನೀಡಿದರು.
ಮಂಗಳೂರು ಮೀನುಗಾರಿಕಾ ಬಂದರಿನ ೩ನೆ ಹಂತದ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳೂರು ಹಳೆ ಬಂದರು ವ್ಯಾಪ್ತಿಯಲ್ಲಿ 11 ಫ್ಲೋಟಿಂಗ್ ಜೆಟ್ಟಿ ಕಾಮಗಾರಿಗಳು ಮಂಜೂರುಗೊಂಡಿವೆ. ಉಳ್ಳಾಲ ಕೋಡಿಯಲಲಿ ನಾಡದೋಣಿ ತಂಗಲು ಜೆಟ್ಟಿ ನಿರ್ಮಿಸಲು ರಾಜ್ಯ ಸರಕಾರ ಅನುತಿ ನೀಡಿದೆ ಎಂದು ಗಣರಾಜ್ಯೋತ್ಸವ ಸಂದೇಶ ನೀಡಿದ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
158 ಕೊರಗ ಕುಟುಂಬಗಳಿಗೆ ಹೊಸತಾಗಿ ಪಡಿತರ ಚೀಟಿ:
ದ.ಕ. ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿಲ್ಲದ ಪರಿಶಿಷ್ಟ ಪಂಗಡದ ಕೊರಗ ಸಮುದಾಯದವರಿಗೆ ಆದ್ಯತಾ ಪಡಿತರ ಚೀಟಿ ನೀಡುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದು, ಅದರಂತೆ ವಿಶೇಷ ಆಂದೋಲನ ನಡೆಸಿ 158 ಕುಟುಂಬಗಳಿಗೆ ಪಡಿತರ ಚೀಟಿ ನೀಡಿ 230 ಮಂದಿ ಸದಸ್ಯರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.