
ಅಗಲಿದ ಮುಜಾಫರ್ ಅಸ್ಸಾದಿ ಮತ್ತು ರೖತ ನಾಯಕ ಜಿ.ಸಿ. ಬಯ್ಯಾರೆಡ್ಡಿ ಅವರಿಗೆ ಸಮುದಾಯದ ಶ್ರದ್ದಾಂಜಲಿ
ಮಂಗಳೂರು: ಕನ್ನಡದ ಖ್ಯಾತ ಚಿಂತಕರಾದ ಮುಜಾಫರ್ ಅಸ್ಸಾದಿ ಇವರು ನಮ್ಮನ್ನು ಅಗಲಿದ್ದು, ಇವರ ಅಗಲಿಕೆಗೆ ಸಮುದಾಯ ಕರ್ನಾಟಕ ರಾಜ್ಯ ಸಮಿತಿಯು ತಿವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.
ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ, ಎಂ.ಫಿಲ್. ಪದವಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿ, ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್-ಡಾಕ್ಟರೇಟ್ ಪದವಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಜೆಆರ್‌ಎಫ್ ಫೆಲೋಶಿಪ್, ರಾಕ್ ಫೆಲ್ಲರ್ ಫೆಲೋಶಿಪ್ ಮೊದಲಾದ ಪ್ರತಿಷ್ಠಿತ ಪದವಿ ಮತ್ತು ಪುರಸ್ಕಾರಗಳನ್ನು ಅವರು ಪಡೆದಿದ್ದರು.
ಅವರು ಇತಿಹಾಸ, ಸಮಾಜಶಾಸ್ತ್ರ ಮಾನವಶಾಸ್ತ್ರ ಅಭಿವೃದ್ಧಿಶಾಸ್ತ್ರ ಮೊದಲಾದ ಕ್ಷೇತ್ರಗಳ ಬಗ್ಗೆ ತಮ್ಮ ವಿನೂತನ ಚಿಂತನೆಗಳು ಮತ್ತು ವಿದ್ವತ್ಪೂರ್ಣ ಬರಹಗಳಿಂದ ಒಳನೋಟ ನೀಡುತ್ತಿದ್ದರು.
ಸುಮಾರು 500ಕ್ಕೂ ಹೆಚ್ಚು ಪ್ರಬಂಧಗಳನ್ನು ದೇಶ ವಿದೇಶಗಳಲ್ಲಿ ಮಂಡಿಸಿದ ಹೆಗ್ಗಳಿಗೆ ಪ್ರೊ. ಅಸ್ಸಾದಿ ಅವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಸುಮಾರು 14 ಮಹತ್ವದ ಕೃತಿಗಳನ್ನು ರಚಿಸಿದ್ದು ಇವರಿಗೆ ಸಮುದಾಯ ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ.
ಜೊತೆಗೆ ಕರ್ನಾಟಕದಲ್ಲಿ ಜನಪರ ವಿಧ್ಯಾರ್ಥಿ ಸಂಘಟನೆಯ ಮೂಲಕವಾಗಿ ಕರ್ನಾಟಕದ ಜೀವಪರ ಚಳುವಳಿಗಳಲ್ಲಿ ತೊಡಗಿಸಿಕೊಂಡು ರಾಜ್ಯದ ರೖತರ ನೋವುಗಳಿಗೆ ನಿತ್ಯ ಮಿಡಿಯುತ್ತಿದ್ದ ಕರ್ನಾಟಕ ಪ್ರಾಂತ ರೖತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಕೂಡ ನಮ್ಮನ್ನು ಅಗಲಿದ್ದು, ಇವರಿಗೂ ಸಮುದಾಯ ಕರ್ನಾಟಕವು ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ ಎಂದು ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.