
ಕುರ್ಚಿಗಾಗಿ ಕುಸ್ತಿ ಬಿಟ್ಟು ಆದಿವಾಸಿಗಳ ಮಾನವ ಹಕ್ಕುಗಳ ರಕ್ಷಿಸಿ: ಬೃಂದಾ ಕಾರಟ್
ಮಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಕುರ್ಚಿಗಾಗಿ ಕುಸ್ತಿ ನಡೆಸುತ್ತಿದ್ದು, ಅದನ್ನು ಬಿಟ್ಟು ಕೊರಗ ಸಮುದಾಯ ಸೇರಿದಂತೆ ದುರ್ಬಲ ಬುಡಕಟ್ಟು ಗುಂಪುಗಳಾಗಿ ಗುರುತಿಸಲಾಗಿರುವ ಆದಿವಾಸಿಗಳ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಮಾಜಿ ಸಂಸದೆ ಬೃಂದಾ ಕಾರಟ್ ಹೇಳಿದ್ದಾರೆ.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಗುರುವಾರ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಮಿನಿ ವಿಧಾನಸೌಧದವರೆಗೆ ಆಯೋಜಿಸಲಾದ ಆದಿವಾಸಿ ಆಕ್ರೋಶ್ ರ‍್ಯಾಲಿ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊರಗ ಸಮುದಾಯದ ಹೀರೋ, ದೈವವಾಗಿ ಪೂಜಿಸಲ್ಪಡುವ ಕೊರಗಜ್ಜನ ಎದುರು ಅಡ್ಡಬಿದ್ದು, ಆಶೀರ್ವಾದ ಪಡೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ಶತಮಾನಗಳಿಂದ ಅಸ್ಪಶ್ಯತೆ, ದೌರ್ಜನ್ಯದಿಂದ ನಲುಗಿರುವ ಕೊರಗ ಸಮುದಾಯವು ಭೂಮಿ ಹಕ್ಕು, ಪೌಷ್ಠಿಕ ಆಹಾರ, ಶಿಕ್ಷಣ, ಆರೋಗ್ಯದ ಹಕ್ಕಿನಿಂದ ವಂಚಿಸಲಾಗಿದೆ. ಕೊರಗಜ್ಜನನ್ನು ಗೋಡೆಯಲ್ಲಿಟ್ಟು ಪೂಜಿಸಲಾಗುತ್ತದೆ. ಆದರೆ ಆ ಸಮುದಾಯಕ್ಕಿನ್ನೂ ಸೂಕ್ತವಾದ ಗೋಡೆಗಳನ್ನೇ ಒದಗಿಸಲಾಗಿಲ್ಲ. ಇಂತಹ ಅನ್ಯಾಯ, ರಾಜಕೀಯ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿರು.
ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಅತಿಥಿಯಾಗಿದ್ದರು. ಬಹಿರಂಗ ಸಭೆಯಲ್ಲಿ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ.ಎಸ್.ವೈ. ಗುರುಶಾಂತ್, ಶ್ರೀಧರ ನಾಡ ಮೊದಲಾದವರು ಮಾತನಾಡಿದರು.
ರ‍್ಯಾಲಿ..:
ಬಹಿರಂಗ ಸಭೆಗೂ ಮುನ್ನ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಆದಿವಾಸಿ ಕೊರಗ ಸಮುದಾಯದಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದವರೆಗೆ ‘ಆದಿವಾಸಿ ಆಕ್ರೋಶ್ ರ‍್ಯಾಲಿ’ ನಡೆಯಿತು. ಬಹಿರಂಗ ಸಭೆಯ ವೇದಿಕೆ ಹಾಗೂ ಸಭಾಂಗಣದಲ್ಲಿ ಕೊರಗರ ಕುಲಕಸುಬಾದ ಬೆತ್ತದಿಂದ ತಯಾರಿಸಲಾಗುವ ಕೆಲ ಕರಕುಶಲ ಪ್ರಾಕಾರಗಳನ್ನು ಅಳವಡಿಸಲಾಗಿತ್ತು.
ಸಮಿತಿಯ ಮಂಗಳಜ್ಯೋತಿ ಅಧ್ಯಕ್ಷ ಕರಿಯ ಕೆ. ಅಧ್ಯಕ್ಷತೆ ವಹಿಸಿದ್ದರು. ಶೇಖರ್ ವಾಮಂಜೂರು, ಕೃಷ್ಣ ಇನ್ನಾ, ತುಳಸಿ ಬೆಳ್ಮಣ್ಣು, ಶಶಿಧರ್ ಕೆರೆಕಾಡು, ನಿದೇಶ್ ಗುಂಡಾವುಪದವು, ಜಯ ಮಧ್ಯ, ಕೇಶವ ಕೆರೆಕಾಡು, ಅಭಿಜಿತ್, ಕಿರಣ್ ಕತ್ತಲ್ಸಾರ್, ಭಾಗೇಶ್ ಮೆಣ್ಣಬೆಟ್ಟು, ಆಶಿಕ್ ಮೆಣ್ಣಬೆಟ್ಟು, ಪ್ರಶಾಂತ್ ಕಂಕನಾಡಿ, ಪದ್ಮನಾಭ ಮಧ್ಯ, ಜ್ಯೋತಿ ಮಧ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ರಶ್ಮಿ ಮಂಗಳಜ್ಯೋತಿ ವಂದಿಸಿದರು. ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.