
ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕಿಂಗ್’ ತಾಂತ್ರಿಕ ಉಪನ್ಯಾಸ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಕ್ಯಾಂಪಸ್ ಟು ಕಾರ್ಪೊರೇಟ್’ ಸರಣಿ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಎಂಸಿಎ, ಎಂ.ಕಾಂ ಹಾಗೂ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ‘ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಕ್ಯಾಕಿಂಗ್’ ಬಗ್ಗೆ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಹಿಸಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಬಳಕೆಯು ಅವಸ್ಯಕ ಹಾಗೂ ಅನಿವಾರ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಹಾಗೂ ಆನ್ಲೈನ್ ಮೂಲಕ ವ್ಯವಹರಿಸುವ ಸಂದರ್ಭದಲ್ಲಿ ಗೌಪ್ಯತೆಯ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಸುಶಿಕ್ಷಿತರೇ ಹೆಚ್ಚಾಗಿ ಸೈಬರ್ ಅಪರಾಧಗಳಿಗೆ ತುತ್ತಾಗುತ್ತಿರುವ ವಿಷಯವು ಖೇದಕರ. ವಿದ್ಯಾರ್ಥಿಗಳಿಗೆ ಜನಸಾಮಾನ್ಯಲ್ಲಿ ಸೈಬರ್ ಅಪರಾಧಗಳ ಕುರಿತು ಹಾಗೂ ಮುನ್ನೆಚ್ಚರಿಕೆಯ ಬಗ್ಗೆ ಅರಿವು ಮೂಡಿಸುವ ಗುರುತರ ಜವಾಬ್ದಾರಿ ಇದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ನಿಗದಿಪ ಪಠ್ಯ ಕ್ರಮವನ್ನು ಮೀರಿ ಹೊಸ ವಿಷಯಗಳನ್ನು ಕಲಿಯಲು ಅನುವು ಮಾಡಿಕೊಟ್ಟ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಉಪನ್ಯಾಸಕರನ್ನು ಅಭಿನಂದಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಎಸ್‌ಎಪಿ ಅರಿಬಾ ಟೆಕ್ನಾಲಜೀನಸ್‌ನಲ್ಲಿ ಸೀನಿಯರ್ ಪ್ರಾಡಕ್ಟ್ ಸೆಕ್ಯುರಿಟಿ ಸ್ಪೆಶಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಣಿತಾ ಕೆ.ಎಸ್. ಅವರು ವಿದ್ಯಾರ್ಥಿಗಳೇ ಗುರಿಯಾಗುತ್ತಿರುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ, ಸಾಮಾಜಿಕ ಜಾಲತಾಣಗಳಲ್ಲಿ ಗೌಪ್ಯತೆಯನ್ನು ಕಾಪಾಡುವ ಬಗ್ಗೆ, ಪ್ರಾರ್ಯಕ್ಷಿಕೆಗಳ ಸಹಾಯದಿಂದ ವಿವರಣೆ ನೀಡಿದರು. ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕಿಂಗ್ ಕ್ಷೇತ್ರಗಳಲ್ಲಿನ ವಿಪುಲ ಉದ್ಯೋಗಾವಕಾಶಗಳು ಹಾಗೂ ಈ ಉದ್ಯೋಗಗಳನ್ನು ಪಡೆಯಲು ಬೇಕಾದ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು.
ಚೈತನ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಂಯೋಜಕರೂ ಪರೀಕ್ಷಾಂಗ ಕುಲಸಚಿವರೂ ಆಗಿರುವ ವಿನಯಚಂದ್ರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಸಂಯೋಜಕಿ ಶ್ರೀಮಣಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು.