
ಎನ್‌ಐಟಿಕೆ ಬಳಿ ಭೀಕರ ಅಪಘಾತ: ಹಲವರಿಗೆ ಗಂಭೀರ ಗಾಯ
Saturday, January 18, 2025
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್‌ಐಟಿಕೆ ಅಂಡರ್ ಪಾಸ್ ಬಳಿ ಬೈಕ್ ಸ್ಕೂಟರ್ ಹಾಗೂ ಪಾದಾಚಾರಿಗೆ ಬೋಲೇರೋ ಪಿಕಪ್ ಢಿಕ್ಕಿಯಾಗಿ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಬೈಕ್ ಸವಾರ ವೀರಕಂಬ ನಿವಾಸಿ ಕೃಷ್ಣ ಕೌಶಿಕ್ (35), ಸ್ಕೂಟರ್ ಸವಾರ ಸಫ್ವಾನ್, ಸಹ ಸವಾರ ನಜೀರ್, ಪಾದಾಚಾರಿ ಲತೀಫ್, ಹಾಗೂ ಬೋಲೇರೋ ಪಿಕಪ್‌ನಲ್ಲಿದ್ದ ಉತ್ತರ ಕರ್ನಾಟಕ ನಿವಾಸಿಗಳಾದ ಚಾಲಕ ಬೀರಪ್ಪ, ಪ್ರಯಾಣಿಕರಾದ ಅಮರೇಶ, ಭಾಗ್ಯ, ಅನಿತಾ, ರಜಾಕ್, ಮಾನಮ್ಮ, ರಮೇಶ ಎಂದು ಗುರುತಿಸಲಾಗಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್, ಸ್ಕೂಟರ್ ಹಾಗೂ ನಡೆದುಕೊಂಡು ಪಾದಾಚಾರಿಗೆ ಸುರತ್ಕಲ್ ಎನ್‌ಐಟಿಕೆ ಅಂಡರ್ ಪಾಸ್ ಬಳಿ ಬೊಲೆರೋ ಪಿಕಪ್ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೈಕ್, ಸ್ಕೂಟರ್ ಹಾಗೂ ಪಿಕಪ್ ಹೆದ್ದಾರಿ ಬದಿ ಅಪಘಾತ ತಡೆಗೆ ಹಾಕಿದ್ದ ಕಬ್ಬಿಣದ ತಡೆ ಬೇಲಿಗೆ ಢಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಅಂಡರ್ ಪಾಸ್ ಕೆಳಗಡೆ ಬಿದ್ದಿದೆ.
ಅಪಘಾತದಿಂದ ಬೈಕ್, ಸ್ಕೂಟರ್ ಸವಾರ ಸಹಿತ ಬೊಲೆರೋ ಪಿಕಪ್‌ನಲ್ಲಿದ್ದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.