
ಯೂತ್ ಐಕಾನ್ ಆಗಿ ಮನು ಶೆಟ್ಟಿ ಆಯ್ಕೆ
ಉಡುಪಿ: ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ ವಿಶೇಷ ಆಹ್ವಾನಿತ ಯೂತ್ ಐಕಾನ್ ಆಗಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ.
ಅವರು ಉದ್ಯಮಿ ಇನ್ನ ಉದಯ ಶೆಟ್ಟಿ ಮತ್ತು ಜಿ.ಪಂ. ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ದಂಪತಿ ಪುತ್ರಿ.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು ರಾಷ್ಟ್ರೀಯ ಮಟ್ಟದ ಯುವ ಪ್ರತಿಭೆಗಳ 2 ದಿನದ ಅಧಿವೇಶನ ದೆಹಲಿಯಲ್ಲಿ ಜ.11 ಮತ್ತು 12ರಂದು ನಡೆಯಲಿದ್ದು ಭಾರತಾದ್ಯಂತದ 3 ಸಾವಿರ ಯುವಕ ಯುವತಿಯರು ಆಯ್ಕೆಯಾಗಿದ್ದಾರೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಕಸಿತ ಭಾರತದ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಡನೆ ಮತ್ತು ಸಂವಾದ ನಡೆಯಲಿದ್ದು ಆಹ್ವಾನಿತರು ತಮ್ಮ ವಿಚಾರ ಪ್ರಸ್ತುತಪಡಿಸಲಿದ್ದಾರೆ. ವಿವಿಧ ಇಲಾಖೆಗಳ ಪ್ರದರ್ಶನಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ವಿವಿಧ ಇಲಾಖಾ ಮಂತ್ರಿಗಳು, ಅಧಿಕಾರಿಗಳು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪರಿಣಿತರೊಂದಿಗೆ ಸಂವಾದ ನಡೆಯಲಿದೆ.
ಮನು ಶೆಟ್ಟಿ ಎಂಜಿಎಂ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿ ಸಂಘಟನೆ ಎಬಿವಿಪಿ ಹಾಗೂ ಜೆಸಿಐ ಪಡುಬಿದ್ರಿ ಸಕ್ರಿಯ ಸದಸ್ಯೆ.