
ಇಡಿ ಅಧಿಕಾರಿ ಸೋಗಿನಲ್ಲಿ ಬಂದು ದರೋಡೆ: ಎಸ್‌ಪಿ ಅವರಿಂದ ಪರಿಶೀಲನೆ
ವಿಟ್ಲ: ಬೋಳಂತೂರು ಸಮೀಪದ ನಾರ್ಶದ ಉದ್ಯಮಿಯೊಬ್ಬರ ಮನೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿನಲ್ಲಿ ಬಂದ ಆರು ಮಂದಿಯ ತಂಡ ಮನೆಯಲ್ಲಿ ದರೋಡೆ ನಡೆಸಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ಮಂಗಳೂರು ಸಿಂಗಾರಿ ಬೀಡಿ ಮಾಲೀಕ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಅವರ ಮನೆಯಲ್ಲಿ ದರೋಡೆ ನಡೆದಿದೆ. ತಮಿಳುನಾಡಿನ ನೋಂದಣೆ ಹೊಂದಿರುವ ಕಾರಿನಲ್ಲಿ ೬ ಜನ ಅಪರಿಚಿತ ವ್ಯಕ್ತಿಗಳು ಬಂದು, ಇ.ಡಿ. ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಮನೆಯನ್ನು ಪರಿಶೀಲನೆ ನಡೆಸಲು ಅದೇಶವಾಗಿವುದಾಗಿ ಹೇಳಿಕೊಂಡು ಮನೆ ಪ್ರವೇಶಿಸಿದ್ದಾರೆ. ಮನೆ ಮಂದಿಯ ೫ ಮೊಬೈಲ್ ಪೊನ್‌ಗಳನ್ನು ಪಡೆದುಕೊಂಡು ಬಳಿಕ ಮನೆಯನ್ನು ಹುಡುಕಾಡಿರುತ್ತಾರೆ. ಕೊಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ಪಡೆದುಕೊಂಡು, ‘ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಮತ್ತು ಕಸ್ಟಡಿ ತೆಗೆದುಕೊಳ್ಳುತ್ತೇನೆ’ ಎಂಬುದಾಗಿ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ, ಸಹಾಯಕ ಅಧೀಕ್ಷಕ ವಿಜಯ ಪ್ರಸಾದ್, ನಿರೀಕ್ಷಕ ನಾಗರಾಜ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ವಿಟ್ಲ ಠಾಣೆಯಲ್ಲಿ ಕೊಳ್ನಾಡು ನಿವಾಸಿ ಮಹಮ್ಮದ್ ಇಕ್ಬಾಲ್ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ. ಬೆರಳಚ್ಚು ತಜ್ಞರು, ಶ್ವಾನ ದಳ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ.
ತನಿಖೆಗೆ ಬರುವಂತೆ ಸೂಚನೆ!:
ದರೋಡೆಕೋರರು ಮನೆಯಿಂದ ಹೊರಬಂದು ಹಣವನ್ನು ಪಡೆದುಕೊಳ್ಳಲು ಸೂಕ್ತ ದಾಖಲೆಗಳನ್ನು ನೀಡಬೇಕು. ಬೆಂಗಳೂರಿನಲ್ಲಿರುವ ಕಚೇರಿಯಿಂದ ನಗದನ್ನು ಪಡೆದುಕೊಳ್ಳುವಂತೆ ತಿಳಿಸಿ ಸ್ಥಳದಿಂದ ತೆರಳಿದ್ದಾರೆ. ಈ ಸಂದರ್ಭ ಮನೆ ಮಾಲೀಕನ ಪುತ್ರ ಕಾರನ್ನು ದ್ವಿಚಕ್ರವಾಹನದ ಮೂಲಕ ಹಿಂಭಾಲಿಸಿ ಹೋಗಿದ್ದು, ಜಂಕ್ಷನ್ ಒಂದರಲ್ಲಿ ಎಲ್ಲಿ ತೆರಳಿದ್ದಾರೆಂದು ತಿಳಿಯಂದಂತಾಗಿದೆ. ಎಲ್ಲರ ಮೊಬೈಲ್ ಅನ್ನೂ ತೆಗೆದುಕೊಂಡು ಹೋಗಿರುವುದರಿಂದ ತುರ್ತಾಗಿ ಯಾರನ್ನೂ ಸಂಪರ್ಕಿಸಲಾಗದ ಸ್ಥಿತಿ ಮನೆಯರದ್ದಾಗಿತ್ತು.
ಅಡಕೆ ಮಾರಿದ ಹಣ!:
ಮನೆಯ ಸಮೀಪದಲ್ಲೇ ಬೀಡಿ ಕಂಪನಿಯಿದ್ದು, ಸುಮಾರು 80 ಎಕ್ರೆ ಅಡಕೆ ತೋಟ ಇದೆಯೆನ್ನಲಾಗಿದೆ. ಅಡಕೆ ಮಾರಿದ ಹಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದಾರೆಂಬ ಹೇಳಿಕೆಯನ್ನು ತನಿಖೆಯ ವೇಳೆ ನೀಡಿದ್ದಾರೆ. ಶನಿವಾರವಾದ ಕಾರಣದಿಂದ ಕೂಲಿಗಳಿಗೆ ವೇತನ ಬಟುವಾಡೆಗೆ ನಗದು ಇಟ್ಟುಕೊಳ್ಳಲಾಗಿತ್ತೆನ್ನಲಾಗಿದೆ.
ಬಂದಿದ್ದೆಷ್ಟು ಗಂಟೆಗೆ?:
ಶುಕ್ರವಾರ ಸಂಜೆ 7.30ರ ಸುಮಾರಿಗೆ ಬಿಳಿ ಬಣ್ಣದ ಕಾರೊಂದು ಮನೆಯಂಗಳಕ್ಕೆ ಬಂದು ಹಿಂದಿರುಗಿ ಹೋಗಿದೆ. ಇದನ್ನು ಮನೆ ಮಂದಿ ಗಮನಿಸಿದ್ದು, ದಾರಿ ತಪ್ಪಿ ಬಂದಿರಬಹುದೆಂದು ಸುಮ್ಮನಾಗಿದ್ದಾರೆ. ಸುಮಾರು ಅರ್ಧ ತಾಸಿನ ಬಳಿಕ ಮನೆಯ ಕರೆ ಗಂಟೆ ಮೊಳಗಿದ್ದು, ಬಾಗಿಲು ತೆರೆಯುತ್ತಿದ್ದಂತೆ ಇಡಿ ಅಧಿಕಾರಿಗಳೆಂದು ಮನೆಯೊಳಗೆ ತೆರಳಿ ಯಾರಿಗೂ ಮಾತನಾಡಲು ಅವಕಾಶವನ್ನೂ ನೀಡಿದ ಮೊಬೈಲ್ ಕಸಿದುಕೊಂಡಿದ್ದಾರೆ. ಸುಮಾರು 10.30ರವರೆಗೂ ಮನೆಯಲ್ಲಿ ಜಾಲಾಡುವ ಕಾರ್ಯ ಮಾಡಿದ್ದಾರೆ. ಮೂರು ದಿನಗಳಿಂದ ಕಾರು ಪರಿಸರದಲ್ಲಿ ಅನುಮಾನಾಸ್ಪದವಾಗಿ ಸುತ್ತಿಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಸ್ಥಳದಿಂದ ಹಣವನ್ನು ತೆಗೆದುಕೊಂಡು ಹೋದ ಬಳಿಕ ಅನುಮಾನಗೊಂಡ ಮನೆ ಮಂದಿ ಸಂಬಂಧಿಕರಿಗೆ ಮಾಹಿತಿ ನೀಡಿ ರಾತ್ರಿ 1 ಗಂಟೆ ಸುಮಾರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲನೆಯನ್ನು ನಡೆಸಿದಾಗ ಯಾವುದೇ ಕುರುಹು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಯನ್ನು ತ್ವರಿತವಾಗಿ ಮಾಡುತ್ತೇವೆ. ಯಾರೇ ಅನುಮಾನಾಸ್ಪದವಾಗಿ ಬಂದರೂ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದರು.